ಎಸ್‌ಐಆರ್‌ ಕರಡು ಪಟ್ಟಿಯಲ್ಲಿ ಭಾರೀ ಎಡವಟ್ಟು; ತಾಯಿಗೆ 30, ಮಗಳಿಗೆ 28 ವರ್ಷ!

0
85

ಮಂಗಳೂರು : ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಹಲವು ಗೊಂದಲಗಳು ಮುಂದುವರಿದಿರುವ ನಡುವೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ಕರಡು ಪಟ್ಟಿಯಲ್ಲಿನ ಗಂಭೀರ ತಾಂತ್ರಿಕ ಲೋಪಗಳು ಬೆಳಕಿಗೆ ಬಂದಿವೆ.

ಕರಡು ಮತದಾರರ ಪಟ್ಟಿಯಲ್ಲಿ ತಂದೆಗೆ 61 ವರ್ಷ, ತಾಯಿಗೆ 30 ವರ್ಷ ಹಾಗೂ ಮಗಳಿಗೆ 28 ವರ್ಷ ಎಂದು ನಮೂದಿಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಅಂದರೆ ತಾಯಿ ಹುಟ್ಟಿದ ಕೇವಲ ಎರಡು ವರ್ಷಗಳಲ್ಲೇ ಮಗಳು ಹುಟ್ಟಿದಂತಾಗಿದ್ದು, ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ನಡೆದಿರುವ ದೋಷಗಳಿಗೆ ಇದು ಪ್ರಮುಖ ಉದಾಹರಣೆಯಾಗಿದೆ.

ಮತದಾರರ ಮಾಹಿತಿಯ ಮ್ಯಾಪಿಂಗ್‌ ಸಂದರ್ಭದಲ್ಲಿ ಹಲವು ರೀತಿಯ ವ್ಯತ್ಯಾಸಗಳು ಕಂಡುಬಂದಿವೆ. ಮತದಾರರ ಹೆಸರು ತಪ್ಪಾಗಿ ನಮೂದಿಸಿರುವುದು, ಕಾಗುಣಿತ ದೋಷ, ತಂದೆ-ತಾಯಿ ಅಥವಾ ಪತಿ-ಪತ್ನಿಯ ಹೆಸರುಗಳಲ್ಲಿ ವ್ಯತ್ಯಾಸ, ವಯಸ್ಸು ತಪ್ಪಾಗಿ ನಮೂದಿಸಿರುವುದು, ಲಿಂಗದಲ್ಲಿ ಬದಲಾವಣೆ, ಮನೆ ಸಂಖ್ಯೆ ಹಾಗೂ ವಿಳಾಸದ ತಪ್ಪು, ವಾರ್ಡ್‌ ಮತ್ತು ಮತಗಟ್ಟೆ ವಿವರಗಳಲ್ಲಿನ ಗೊಂದಲ ಸೇರಿದಂತೆ ಹಲವು ಲೋಪಗಳು ಕರಡು ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

ಇದಲ್ಲದೆ, ಸರಿಯಾದ ಮ್ಯಾಪಿಂಗ್‌ ಆಗದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ 1.50 ಲಕ್ಷಕ್ಕೂ ಅಧಿಕ ಮತದಾರರಿಗೆ ನೋಟಿಸ್‌ ನೀಡಲಾಗಿದೆ ಎಂದು ತಿಳಿದುಬಂದಿದೆ. ನೋಟಿಸ್‌ ಪಡೆದ ಮತದಾರರು ಅಕ್ಟೋಬರ್ 21ರೊಳಗೆ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಹಾಜರಾಗಿ ತಮ್ಮ ವಿವರಗಳನ್ನು ಪರಿಶೀಲಿಸಿ, ತಿದ್ದುಪಡಿ ಮಾಡಿಸಿಕೊಳ್ಳಬೇಕಾಗಿದೆ.

ಸಂಬಂಧಪಟ್ಟ ಮತದಾರರು ನಿಗದಿತ ಅವಧಿಯೊಳಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ ತಮ್ಮ ಹಕ್ಕುಗಳನ್ನು ಸಮರ್ಥಿಸಿಕೊಳ್ಳದಿದ್ದರೆ, ಅಕ್ಟೋಬರ್ 27ರಂದು ಪ್ರಕಟವಾಗಲಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳುವಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.

ಎಸ್‌ಐಆರ್‌ ಕರಡು ಪಟ್ಟಿಯಲ್ಲಿ ಕಂಡುಬಂದಿರುವ ಇಂತಹ ದೋಷಗಳಿಂದ ಮತದಾರರಲ್ಲಿ ಆತಂಕ ಹೆಚ್ಚಾಗಿದ್ದು, ಪ್ರತಿ ಮತದಾರರ ಹೆಸರು, ವಯಸ್ಸು, ವಿಳಾಸ, ಸಂಬಂಧದ ವಿವರ ಹಾಗೂ ಮತಗಟ್ಟೆ ಮಾಹಿತಿಯನ್ನು ಪರಿಶೀಲಿಸಿ ಸರಿಪಡಿಸುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಅಂತಿಮ ಪಟ್ಟಿ ಪ್ರಕಟಿಸುವ ಮುನ್ನ ಎಲ್ಲ ಲೋಪದೋಷಗಳನ್ನು ಸರಿಪಡಿಸಿ ಅರ್ಹ ಮತದಾರರ ಮತದಾನದ ಹಕ್ಕನ್ನು ಖಾತರಿಪಡಿಸಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.