ಮೂಡುಬಿದಿರೆ: ಬ್ಯಾಂಕ್ ಆಫ್ ಬರೋಡ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ವೀಚೀಸ್ ಕೌಶಲ್ಯ ತರಬೇತಿ ಕೇಂದ್ರ ಮೂಡುಬಿದಿರೆ ಇವರ ಜಂಟಿ ಆಶ್ರಯದಲ್ಲಿ ನಡೆದ ಎರಡು ತಿಂಗಳ ಉಚಿತ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭವು ಸಮಾಜಮಂದಿರ ಸಭಾಂಗಣದಲ್ಲಿ ನಡೆಯಿತು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್ ಮಾತನಾಡಿ, ಟೈಲರಿಂಗ್‌ಗೆ ಸದಾ ಬೇಡಿಕೆ ಇರುವುದರಿಂದ ಸೂಕ್ತ ತರಬೇತಿ ಪಡೆದು ಸ್ವ ಉದ್ಯೋಗ ಆರಂಭಿಸುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು. ಬ್ಯಾಂಕ್ ಅಥವಾ ಸ್ವಸಹಾಯ ಒಕ್ಕೂಟಗಳ ಮೂಲಕ ಸಾಲ ಸೌಲಭ್ಯ ಪಡೆದು ಸ್ವಂತ ಉದ್ಯಮ ಆರಂಭಿಸಲು ಈ ತರಬೇತಿ ಸಹಕಾರಿಯಾಗಲಿದೆ ಎಂದರು.
ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಮಾತನಾಡಿ, ಮಹಿಳೆಯರು ತಮ್ಮ ಆಸಕ್ತಿಗೆ ಅನುಗುಣವಾಗಿ ವಿನೂತನ ವಸ್ತ್ರ ವಿನ್ಯಾಸಗಳನ್ನು ರೂಪಿಸಿ ಸ್ವ ಉದ್ಯೋಗ ಕೈಗೊಳ್ಳುವ ಮೂಲಕ ಲಭ್ಯವಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ವೀಚೀಸ್ ಕೌಶಲ್ಯ ಕೇಂದ್ರದ ನಿರ್ದೇಶಕಿ ಶುಭಲಕ್ಷ್ಮೀ ಮಾತನಾಡಿ, ತರಬೇತಿಯ ಬಳಿಕ ಉದ್ಯೋಗ ಹಾಗೂ ಸ್ವ ಉದ್ಯೋಗಕ್ಕೆ ಇರುವ ಅವಕಾಶಗಳು ಮತ್ತು ಕಲಿತ ಕೌಶಲ್ಯವನ್ನು ಮುಂದುವರಿಸಿಕೊಂಡು ಗುಂಪು ಚಟುವಟಿಕೆಗಳ ಮೂಲಕ ಅಭಿವೃದ್ಧಿಪಡಿಸುವ ಕುರಿತು ಮಾಹಿತಿ ನೀಡಿದರು.
ತರಬೇತಿ ಪಡೆದ ಕೆಲವು ಮಹಿಳೆಯರು ತಮ್ಮ ಅನುಭವ ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು. ಸಂಪನ್ಮೂಲ ವ್ಯಕ್ತಿ ಅನಿತಾ ಆನಂದ್ ಒಂಟಿಕಟ್ಟೆ ಉಪಸ್ಥಿತರಿದ್ದರು.
ಆರತಿ ಜೈನ್ ಕಾರ್ಯಕ್ರಮ ನಿರೂಪಿಸಿದರು. ಯೋಗಿತ ಸ್ವಾಗತಿಸಿದರು. ಸುಮ ಕಾರ್ಕಳ ವಂದಿಸಿದರು.
ಮೂಡುಬಿದಿರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸುಮಾರು 26 ಮಹಿಳೆಯರು ತರಬೇತಿಯಲ್ಲಿ ಯಶಸ್ವಿಯಾಗಿ ಭಾಗವಹಿಸಿ ಪ್ರಮಾಣಪತ್ರಗಳನ್ನು ಪಡೆದುಕೊಂಡರು

