ಎಚ್‌ಪಿಸಿಎಲ್‌ನಲ್ಲಿ ನಾಲ್ವರು ಮಹಿಳಾ ಗುತ್ತಿಗೆ ಕಾರ್ಮಿಕರ ವಜಾ: ಮರುನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ

0
11

ಮಂಗಳೂರು: ಸುರತ್ಕಲ್‌ ಸಮೀಪದ ಬೈಕಂಪಾಡಿಯ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (ಎಚ್‌ಪಿಸಿಎಲ್‌) ಘಟಕದಲ್ಲಿ ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಮಹಿಳಾ ಕಾರ್ಮಿಕರನ್ನು ಯಾವುದೇ ಮುನ್ಸೂಚನೆ ನೀಡದೆ ಕೆಲಸದಿಂದ ಕೈಬಿಡಲಾಗಿದೆ ಎಂದು ಆರೋಪಿಸಿ ಸಿಐಟಿಯು ಹಾಗೂ ಸುರತ್ಕಲ್‌ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ಸೆಪ್ಟೆಂಬರ್‌ 1ರಂದು ಎಂದಿನಂತೆ ಕೆಲಸಕ್ಕೆ ತೆರಳಿದ ವೇಳೆ ನಾಲ್ವರು ಮಹಿಳಾ ಕಾರ್ಮಿಕರಿಗೆ ಎಚ್‌ಪಿಸಿಎಲ್‌ ಘಟಕದ ಮುಖ್ಯ ದ್ವಾರದಲ್ಲಿ ಪ್ರವೇಶ ನಿರಾಕರಿಸಲಾಗಿದೆ. ಅವರ ಸೇವೆಯನ್ನು ಮುಂದುವರಿಸದಂತೆ ಹಿರಿಯ ಅಧಿಕಾರಿಗಳಿಂದ ಸೂಚನೆ ಬಂದಿದೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿರುವುದಾಗಿ ಕಾರ್ಮಿಕರು ಹೇಳಿದ್ದಾರೆ. ಕಂಪನಿ ಅಥವಾ ಗುತ್ತಿಗೆದಾರರಿಂದ ಯಾವುದೇ ಮುನ್ಸೂಚನೆ ಅಥವಾ ಅಧಿಕೃತ ಮಾಹಿತಿ ನೀಡಲಾಗಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಕೆಲಸ ಕಳೆದುಕೊಂಡವರಲ್ಲಿ ಸುವರ್ಣಾ ಪಾಟೀಲ್‌ ಅವರು 25 ವರ್ಷಗಳಿಂದ ಎಚ್‌ಪಿಸಿಎಲ್‌ನಲ್ಲಿ ಸ್ವಚ್ಛತಾ ಕಾರ್ಮಿಕೆಯಾಗಿ, ಸೂರಮ್ಮ ಹಾಗೂ ಶರಣಮ್ಮ ತಲಾ 10 ವರ್ಷಗಳಿಂದ ಮತ್ತು ಪಾರ್ವ್ವ ಅವರು 15 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಉದ್ಯೋಗ ಕಳೆದುಕೊಂಡ ಬಳಿಕ ನಾಲ್ವರೂ ಮಹಿಳೆಯರು ತಮ್ಮ ಸಮಸ್ಯೆ ಪರಿಹರಿಸುವಂತೆ ಮನವಿ ಸಲ್ಲಿಸಲು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಲು ಪ್ರತಿದಿನ ಕಂಪನಿಯ ಗೇಟ್‌ಗೆ ತೆರಳುತ್ತಿದ್ದರು. ಆದರೆ ತಮ್ಮ ಅಹವಾಲು ಆಲಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿಐಟಿಯು ಹಾಗೂ ಸುರತ್ಕಲ್‌ ನಾಗರಿಕ ಹೋರಾಟ ಸಮಿತಿ ಕಾರ್ಮಿಕರ ಪರವಾಗಿ ಹೋರಾಟಕ್ಕೆ ಮುಂದಾಗಿದೆ. ಬುಧವಾರ ಕಂಪನಿಯ ಮುಖ್ಯ ದ್ವಾರದ ಬಳಿ ಪ್ರತಿಭಟನೆ ನಡೆಸಿ, ಮಹಿಳಾ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಸೇರಿಸಬೇಕು ಹಾಗೂ ಅವರ ಸೇವೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಲಾಯಿತು.

ಸಿಪಿಐ(ಎಂ) ಮುಖಂಡ ಮುನೀರ್‌ ಕಾಟಿಪಳ್ಳ ಅವರು ಮಾತನಾಡಿ, ಯಾವುದೇ ಮುನ್ಸೂಚನೆ ನೀಡದೆ ದೀರ್ಘಕಾಲ ಸೇವೆ ಸಲ್ಲಿಸಿರುವ ಗುತ್ತಿಗೆ ಮಹಿಳಾ ಕಾರ್ಮಿಕರನ್ನು ಕೆಲಸದಿಂದ ದೂರವಿಡಲಾಗಿದೆ ಎಂದು ಆರೋಪಿಸಿದರು. ಗುತ್ತಿಗೆ ಕಾರ್ಮಿಕರಿಗೆ ಸಂಬಂಧಿಸಿದ ಕಾನೂನುಬದ್ಧ ಹಕ್ಕುಗಳು ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಖಚಿತಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ನಾಲ್ವರು ಮಹಿಳಾ ಕಾರ್ಮಿಕರನ್ನು ಮರುನೇಮಕ ಮಾಡಬೇಕು, ಬಾಕಿ ವೇತನ ಸೇರಿದಂತೆ ಸೇವಾ ನಿರಂತರತೆ ನೀಡಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಈ ಕುರಿತು ಎಚ್‌ಪಿಸಿಎಲ್‌ ಆಡಳಿತಕ್ಕೆ ಮನವಿ ಸಲ್ಲಿಸಿ, ಸಮಸ್ಯೆಯನ್ನು ಏಳು ದಿನಗಳೊಳಗೆ ಪರಿಹರಿಸಬೇಕು ಎಂದು ಗಡುವು ನೀಡಲಾಗಿದೆ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಹಾಗೂ ತೀವ್ರ ಪ್ರತಿಭಟನೆ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.