ಕೊಂಜಾಡಿಯಲ್ಲಿ ಅ.12ರಂದು 13ನೇ ವರ್ಷದ ನವರಾತ್ರಿ ಮಹೋತ್ಸವ

0
10

ಕೊಂಜಾಡಿ: ಹೆಬ್ರಿ ತಾಲೂಕು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ (ರಿ.) ಕೊಂಜಾಡಿ ವತಿಯಿಂದ 13ನೇ ವರ್ಷದ ಕೊಂಜಾಡಿ ನವರಾತ್ರಿ ಮಹೋತ್ಸವವು ಅಕ್ಟೋಬರ್ 12ರಂದು ಸೋಮವಾರ ಕೊಂಜಾಡಿ ಸಭಾಭವನದಲ್ಲಿ ನಡೆಯಲಿದೆ.

ಬೆಳಗ್ಗೆ 8.45ಕ್ಕೆ ಮೂರ್ತಿ ಪ್ರತಿಷ್ಠಾಪನೆ, 10.30ಕ್ಕೆ ದುರ್ಗಾಹೋಮ ಹಾಗೂ ದುರ್ಗಾಪೂಜೆ ನಡೆಯಲಿದೆ. ಬೆಳಗ್ಗೆ 11.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದ್ದು, ಸಾಂದೀಪನಿ ಆಶ್ರಮ, ಕೇಮಾರು ಇದರ ಶ್ರೀ ಶ್ರೀ ಈಶವಿಠಲದಾಸ ಸ್ವಾಮೀಜಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೊಂಜಾಡಿ ವ್ಯಾಪ್ತಿಯ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ವಿದ್ಯಾಭ್ಯಾಸದ ಜತೆಗೆ ನಿರಂತರ ಭಜನೆಯಲ್ಲಿ ಪಾಲ್ಗೊಳ್ಳುತ್ತಿರುವ ಭಜನಾ ಮಂಡಳಿಯ ಬಾಲಕ-ಬಾಲಕಿಯರು, ದೇವಸ್ಥಾನದ ಸೇವೆ ಸಲ್ಲಿಸಿದ ಹಿರಿಯ ಪರಿಚಾರಕರು ಹಾಗೂ ನಿರಂತರ ಭಜನಾ ಮಂಗಲೋತ್ಸವಕ್ಕೆ ಆಗಮಿಸುವ ಭಜನಾ ಮಂಡಳಿಗಳ ಓರ್ವ ಸದಸ್ಯರನ್ನು ಗುರುತಿಸಿ ಸನ್ಮಾನಿಸಲಾಗುವುದು. ಅಶಕ್ತರಿಗೆ ಸಹಾಯಧನವನ್ನೂ ವಿತರಿಸಲಾಗುತ್ತದೆ.

ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ ಯಕ್ಷ ರಾಘವ ಜನ್ಸಾಲೆ ನೇತೃತ್ವದ ಕಾಲಮಿತಿ ಯಕ್ಷಕಲಾ ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಸಂಜೆ 6 ಗಂಟೆಗೆ ವಿಗ್ರಹ ವಿಸರ್ಜನಾ ಪೂಜೆ ನೆರವೇರಿದ ಬಳಿಕ ಪುರಮೆರವಣಿಗೆ ದೇವಸ್ಥಾನದಿಂದ ಹೊರಟು ಕೊಂಜಾಡಿ ಪೇಟೆಗೆ ತೆರಳಿ, ಅದೇ ಮಾರ್ಗವಾಗಿ ಮರಳಿ ಗಂಟುಬೀಳು ಹೊಳೆಯಲ್ಲಿ ವಿಗ್ರಹ ಬಲಸ್ಥಂಭನ ನಡೆಯಲಿದೆ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಬಸವಶ್ರೀ ಕಾಯಕ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ (ರಿ.) ಕೊಂಜಾಡಿ ಇದರ ನವರಾತ್ರಿ ಮಹೋತ್ಸವಕ್ಕೆ ಸರ್ವರಿಗೂ ಆದರದ ಸ್ವಾಗತವನ್ನು ನವರಾತ್ರಿ ಮಹೋತ್ಸವ ಸಮಿತಿ, ಅಧ್ಯಕ್ಷರು, ಸರ್ವಸದಸ್ಯರು ಹಾಗೂ ಗ್ರಾಮಸ್ಥರು ಕೋರಿದ್ದಾರೆ.