ಬಂಟ್ವಾಳ : ಮಾದಕ ದ್ರವ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ 48 ವರ್ಷದ ವ್ಯಕ್ತಿಯೊಬ್ಬರನ್ನು ಬಂಟ್ವಾಳ ತಾಲೂಕಿನ ಕಲ್ಲಿಗೆ ಗ್ರಾಮದ ಬ್ರಹ್ಮರಕೂಟ್ಲು ಟೋಲ್ ಗೇಟ್ ಸಮೀಪದ ಸರ್ವಿಸ್ ರಸ್ತೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು 1.93 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಸೇರಿದಂತೆ ವಿವಿಧ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತನನ್ನು ಪುದು ಗ್ರಾಮದ ಅಮ್ಮೆಮ್ಮಾರ್ ಮೂಲದ, ಪ್ರಸ್ತುತ ಫರಂಗಿಪೇಟೆಯ ಟಿ.ಕೆ. ಫ್ಲ್ಯಾಟ್‌ನಲ್ಲಿ ವಾಸಿಸುತ್ತಿರುವ ಅಶ್ರಫ್ ಅಲಿಯಾಸ್ ಮೊಹಮ್ಮದ್ ಅಶ್ರಫ್ (48) ಎಂದು ಗುರುತಿಸಲಾಗಿದೆ.
ಪೊಲೀಸ್ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ಅವರ ನೇತೃತ್ವದ ತಂಡಕ್ಕೆ ದೊರೆತ ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ ಆರೋಪಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಆತನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ.
ತಪಾಸಣೆ ವೇಳೆ ಆರೋಪಿಯ ಪ್ಯಾಂಟ್ ಜೇಬಿನಲ್ಲಿ ಬಿಳಿ ಬಣ್ಣದ ಪುಡಿ ಹೊಂದಿದ್ದ ನಾಲ್ಕು ಪ್ಯಾಕೆಟ್‌ಗಳು ಪತ್ತೆಯಾಗಿವೆ. ಅಲ್ಲದೆ, ಆತನ ಸ್ಕೂಟರ್‌ನ ಸೀಟಿನ ಅಡಿಯಲ್ಲಿ ಇನ್ನೂ ಐದು ಪ್ಯಾಕೆಟ್‌ಗಳು ಪತ್ತೆಯಾಗಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ಈ ಪುಡಿಯು ಆಂಫೆಟಮೈನ್ ಅಥವಾ ಮೆಥಾಂಫೆಟಮೈನ್ ಮಾದರಿಯ ಮಾದಕ ದ್ರವ್ಯವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ವಸ್ತುವಿನ ನಿಖರ ಸ್ವರೂಪವನ್ನು ದೃಢಪಡಿಸಲು ಪರೀಕ್ಷೆಯ ಅಗತ್ಯವಿದೆ.
ಆರೋಪಿಯಿಂದ ಎರಡು ಮೊಬೈಲ್ ಫೋನ್‌ಗಳು, 1,870 ರೂ. ನಗದು, ಡೆಬಿಟ್ ಕಾರ್ಡ್, ಎಂಟು ಖಾಲಿ ಜಿಪ್‌ಲಾಕ್ ಕವರ್‌ಗಳು, ತೂಕದ ಯಂತ್ರ ಹಾಗೂ ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯವನ್ನು ಸುಮಾರು 1.93 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

