ಅ.20ರಂದು ಚಂಡಿಕಾಯಾಗ, ರಜತ ರಥೋತ್ಸವ; ಅ.21ರಂದು ವಿಜಯೋತ್ಸವ
ಕಮಲಶಿಲೆ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ, ಶ್ರೀಕ್ಷೇತ್ರ ಕಮಲಶಿಲೆಯಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ಶರನ್ನವರಾತ್ರಿ ಮಹೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕರ್ನಾಟಕ ಸರಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಶ್ರೀಕ್ಷೇತ್ರದಲ್ಲಿ ಅಕ್ಟೋಬರ್ 11ರ ಭಾನುವಾರ ಬೆಳಗ್ಗೆ 8.30ಕ್ಕೆ ಮಹೋತ್ಸವದ ಉದ್ಘಾಟನೆ ನೆರವೇರಲಿದೆ. ಕೋಟೇಶ್ವರದ ಎನ್.ಆರ್. ಆಚಾರ್ಯ ಆಸ್ಪತ್ರೆಯ ಖ್ಯಾತ ಮೂಳೆ ತಜ್ಞರಾದ ಡಾ. ಪ್ರದೀಪಕುಮಾರ್ ಶೆಟ್ಟಿ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.
ಅಕ್ಟೋಬರ್ 12ರಿಂದ 21ರವರೆಗೆ ಪ್ರತಿದಿನ ನವರಾತ್ರಿ ವಿಶೇಷ ಪೂಜೆ, ಮಹಾಪೂಜೆ, ತ್ರಿಕಾಲ ಬಲಿ ಉತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಪ್ರತಿದಿನ ಸಂಜೆ 7 ಗಂಟೆಗೆ ಮಹಾಮಂಗಳಾರತಿ ನಡೆಯಲಿದ್ದು, ಸಂಜೆ 5.30ರಿಂದ ರಾತ್ರಿ 7.15ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 16ರ ಶುಕ್ರವಾರ ರಾತ್ರಿ ಶಾರದಾದೇವಿಯ ಪ್ರತಿಷ್ಠಾಪನೆ ಹಾಗೂ ವಿಶೇಷ ಪೂಜೆ ನೆರವೇರಲಿದೆ. ಅಕ್ಟೋಬರ್ 20ರ ಮಂಗಳವಾರ ಮಹಾನವಮಿಯ ಪ್ರಯುಕ್ತ ಮಧ್ಯಾಹ್ನ ಶ್ರೀಚಂಡಿಕಾಯಾಗ ನಡೆಯಲಿದ್ದು, ರಾತ್ರಿ ರಜತ ರಥೋತ್ಸವ ಹಾಗೂ ಪುಷ್ಪಕವಾಹನದಲ್ಲಿ ರಥಬೀದಿ ಮತ್ತು ರಾಜಬೀದಿಗಳಲ್ಲಿ ಪುರಮೆರವಣಿಗೆ ಜರುಗಲಿದೆ.
ಅಕ್ಟೋಬರ್ 21ರ ಬುಧವಾರ ಬೆಳಗಿನ ಜಾವ 6.05ಕ್ಕೆ ಕದಿರು ಮುಹೂರ್ತ ನಡೆಯಲಿದೆ. ಬಳಿಕ ಧಾನ್ಯ ಸಂಗ್ರಹ, ಕಣಜ ತುಂಬಿಸುವುದು ಹಾಗೂ ಶಮೀಪೂಜೆ ನೆರವೇರಲಿದ್ದು, ಸಂಜೆ ವಿಜಯೋತ್ಸವದೊಂದಿಗೆ ಶರನ್ನವರಾತ್ರಿ ಮಹೋತ್ಸವ ಸಮಾಪನಗೊಳ್ಳಲಿದೆ.
ಚಿನ್ನದ ರಥ ನಿರ್ಮಾಣಕ್ಕೆ ದೇಣಿಗೆ ಮನವಿ
ಶ್ರೀಕ್ಷೇತ್ರದ ವತಿಯಿಂದ ನಡೆಸಲ್ಪಡುವ ಕಮಲಶಿಲೆ ದಶಾವತಾರ ಯಕ್ಷಗಾನ ಮೇಳದ 2026–27ನೇ ಸಾಲಿನ ಎಲ್ಲಾ ಆಟಗಳು ಮುಂಗಡವಾಗಿ ಬುಕ್ಕಿಂಗ್ ಆಗಿವೆ. 2027–28ನೇ ಸಾಲಿನಲ್ಲಿ ಯಕ್ಷಗಾನ ಆಟ ಆಡಿಸಲು ಆಸಕ್ತರು ದೇವಸ್ಥಾನದ ಕಚೇರಿಯಲ್ಲಿ ₹5,000 ಮುಂಗಡ ಹಣ ಪಾವತಿಸಿ ದಿನಾಂಕ ನಿಗದಿಪಡಿಸಿಕೊಳ್ಳಬಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಇದೇ ವೇಳೆ, ಶ್ರೀಕ್ಷೇತ್ರದಲ್ಲಿ ನೂತನ ಚಿನ್ನದ ರಥ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಭಕ್ತರು ಹಾಗೂ ದಾನಿಗಳು ದೇಣಿಗೆ ನೀಡಿ ಸಹಕರಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.
ಶ್ರೀಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ ಹಾಗೂ ಅನುವಂಶಿಕ ಜೊತೆ ಮೊಕ್ತೇಸರರಾದ ಆದ್ರೆ ಚಂದ್ರಶೇಖರ ಶೆಟ್ಟಿ ಅವರು ಭಕ್ತಾದಿಗಳಿಗೆ ಮಹೋತ್ಸವಕ್ಕೆ ಆಗಮಿಸಿ ಶ್ರೀದೇವಿಯ ಪ್ರಸಾದ ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಆಹ್ವಾನಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: 9591560809 / 7022449830.

