ಕಲೆ ಬೆಳೆಸುವಲ್ಲಿ ಕಲಾವಿದನ ಪಾತ್ರ ಮಹತ್ವದ್ದಾಗಿದೆ: ಸಮ್ಮೇಳನಾಧ್ಯಕ್ಷ ಡಾ| ಟಿ. ಶ್ಯಾಮ್ ಭಟ್
ಮುಂಬಯಿ: ‘ಯಕ್ಷಗಾನದ ಪ್ರತಿಷ್ಠೆ ಹಾಗೂ ಗೌರವವನ್ನು ಕಾಪಾಡುವಲ್ಲಿ ಯಕ್ಷಗಾನ ಕಲಾವಿದರು ಹಾಗೂ ಸಂಘಟಕರ ಪಾತ್ರ ಬಹಳಷ್ಟಿದೆ. ಮುಖ್ಯವಾಗಿ ಕಲಾವಿದರು ಶಿಸ್ತು ಬದ್ದರಾಗಿರಬೇಕು. ಸಂಘಟಕರು, ವ್ಯವಸ್ಥಾಪಕರು ಹಾಗೂ ಕಲಾವಿದರ ಮಧ್ಯೆ ಸಮನ್ವಯತೆ ಇರಬೇಕು. ನಮ್ಮ ಹಿರಿಯ ಕಲಾವಿದರು ಇದನ್ನು ಮಾಡುತ್ತಾ బందిದ್ದಾರೆ. ಇಂದು ಅನೇಕ ಕಾರಣಗಳಿಂದ ಕೆಲವು ವ್ಯತ್ಯಾಸಗಳು ಆಗುವುದು ಸಾಮಾನ್ಯ, ಒಪ್ಪಿಕೊಂಡ ಕಲಾವಿದನೊಬ್ಬ ಕಾರ್ಯಕ್ರಮಗಳಿಗೆ ಸರಿಯಾಗಿ ಭಾಗವಹಿಸುವುದು ಮುಖ್ಯ, ಕಲೆಯ ಗೌರವವನ್ನು ಉಳಿಸಿ-ಬೆಳೆಸುವಲ್ಲಿ ಕಲಾವಿದನ ಪಾತ್ರ ಮಹತ್ವದ್ದಾಗಿದೆ’ ಎಂದು ಯಕ್ಷಗಾನ ಕಲಾಪೋಷಕ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ| ಟಿ. ಶ್ಯಾಮ್ ಭಟ್ ನುಡಿದರು.

ಅವರು ಮುಂಬೈಯ ಪ್ರಖ್ಯಾತ ಯಕ್ಷಗಾನ ಕಲಾ ಸಂಘಟನೆಯಾದ ಅಜೆಕಾರು ಕಲಾಭಿಮಾನಿ ಬಳಗದ ‘ರಜತ ಪರ್ವ’ ಸಂಭ್ರಮ ಅಂಗವಾಗಿ ಅ. 3. 4 ರಂದು ಕುರ್ಲಾ ಪೂರ್ವದ ಬಂಟರ ಭವನದ ದಿ.ಕಲ್ಲಾಡಿ ವಿಠಲ ಶೆಟ್ಟಿ ಆವರಣದಲ್ಲಿ ಛಂದೋಬ್ರಹ್ಮ ಡಾ.ಶಿಮಂತೂರು ನಾರಾಯಣ ಶೆಟ್ಟಿ ಸಭಾಂಗಣದ ಡಾ.ಆರ್.ಕೆ. ಶೆಟ್ಟಿ ಯಕ್ಷಕಲಾ ವೇದಿಕೆಯಲ್ಲಿ ಅದ್ದೂರಿಯಿಂದ ಆಯೋಜಿಸಲಾದ ‘ಮುಂಬಯಿ ಯಕ್ಷಗಾನ ಸಮ್ಮೇಳನ’ದ ಅಧ್ಯಕ್ಷತೆ ವಹಿಸಿ ಅ.4 ರಂದು ಜರಗಿದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣಗೈದರು.’ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಕಲಾ ಸಂಘಟನ ಚಾತುರ್ಯ ಮೆಚ್ಚುವಂಥದ್ದಾಗಿದೆ. ಸಮ್ಮೇಳನ ಸಮಿತಿಯ ವಿಶೇಷ ಪರಿಶ್ರಮದಿಂದ ಎರಡು ದಿನಗಳ ಯಕ್ಷಗಾನ ಸಮ್ಮೇಳನವು ಯಶಸ್ವಿಯಾಗಿ ನಡೆದಿರುವುದು ಹೆಮ್ಮೆ ಮತ್ತು ಅಭಿಮಾನದ ವಿಷಯವಾಗಿದೆ’ ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಅವರು, ಎರಡು ದಿನಗಳ ಸಮ್ಮೇಳನದ ಸಂಪೂರ್ಣ ಕಾರ್ಯ ಕಲಾಪಗಳ ಬಗ್ಗೆ ಅವಲೋಕನ ನಡೆಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರು ಮಾತನಾಡಿ ‘ಯಕ್ಷಗಾನ ಕ್ಷೇತ್ರದ ತಜ್ಞರು ಸಲಹೆಗಾರಾಗಿ, ಸಂಚಾಲಕರಾಗಿ ಸಮ್ಮೇಳನದ ಯಶಸ್ಸಿಗೆ ಕಾರಣರಾಗಿದ್ದಾರೆ. ಎರಡು ದಿನಗಳಲ್ಲಿ ಜರಗಿದ ವಿವಿಧ ಗೋಷ್ಠಿಗಳು ಯಕ್ಷಗಾನ ರಂಗಕ್ಕೆ ದಿಕ್ಸೂಚಿಯಾಗಿದೆ’ ಎಂದರು.
‘ನವರಸಗಳನ್ನು ಒಳಗೊಂಡಿರುವ ತುಳುನಾಡಿನ ಯಕ್ಷಗಾನವು ಸಂಸ್ಕೃತಿ ಪ್ರೇಮ, ಧರ್ಮಾಭಿಮಾನ ಮತ್ತು ಭಕ್ತಿಯನ್ನು ಮೂಡಿಸುವಂತಹ ಮಹತ್ವದ ಕಲೆಯಾಗಿದೆ. ಇಂತಹ ಶ್ರೇಷ್ಠ ಕಲೆಯನ್ನು ವಿಶ್ವಕಲೆಯಾಗಿ ಘೋಷಿಸಬೇಕಾಗಿದೆ. ಕಳೆದ 25 ವರ್ಷಗಳಿಂದ ಅಜೆಕಾರು ಕಲಾಭಿಮಾನಿ ಬಳಗವು ಯಕ್ಷಗಾನವನ್ನು ಉಳಿಸಿ ಬೆಳೆಸುವುದರೊಂದಿಗೆ ಕಲೆ-ಕಲಾವಿದರ ಸೇವೆಗೆ ಕಂಕಣಬದ್ಧವಾಗಿದೆ. ಅವರಿಗೆ ಕಲಾಭಿಮಾನಿಗಳ ಪ್ರೋತ್ಸಾಹ, ಸಹಕಾರ ಸದಾ ಇರಲಿ.

ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಒಡಿಯೂರು
ಸಮ್ಮೇಳನ ವೇದಿಕೆಯ ಮುಖ್ಯ ಪ್ರಾಯೋಜಕರಾದ ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್. ಕೆ. ಶೆಟ್ಟಿ ಅವರು ಮಾತನಾಡಿ ‘ಎರಡು ದಿನಗಳ ಸಮ್ಮೇಳನವು ಯಕ್ಷಗಾನಕ್ಕೆ ಅಪಾರವಾದ ಗೌರವವನ್ನು ತಂದುಕೊಟ್ಟಿದೆ. ಅಜೆಕಾರು ಕಲಾಭಿಮಾನಿ ಬಳಗವು ಅನೇಕ ಕಲಾವಿದರನ್ನು ಗೌರವಿಸಿ, ಬೃಹತ್ ಕೃತಿಗಳನ್ನು ಬಿಡುಗಡೆ ಮಾಡುವ ಮೂಲಕ ಯಕ್ಷಗಾನವನ್ನು ಉಳಿಸಿ-ಬೆಳೆಸಿದೆ. ಬಾಲಕೃಷ್ಣ ಶೆಟ್ಟರಿಗೆ ಇನ್ನು ಮುಂದೆ ಸುವರ್ಣ ಮಹೋತ್ಸವ ಆಚರಿಸುವಂತಹ ಸೌಭಾಗ್ಯ ದೊರೆಯಲಿ’ ಎಂದು ಶುಭಹಾರೈಸಿದರು.
ಸಮ್ಮೇಳನದ ಪ್ರಧಾನ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಏಳು ಪ್ರಮುಖ ಅಂಶಗಳನ್ನೊಳಗೊಂಡ ಮುಂಬಯಿ ಯಕ್ಷಗಾನ ಸಮ್ಮೇಳನದ ಠರಾವನ್ನು ಸಭೆಯ ಮುಂದೆ ಮಂಡಿಸಿದರು.

ಸಮ್ಮೇಳನದ ಸಪ್ತಾಂಶ ಠರಾವಿನ ಮುಖ್ಯಾಂಶಗಳು:
1.ಯಕ್ಷಗಾನವನ್ನು ಕರ್ನಾಟಕದ ಅಧಿಕೃತ ರಾಜ್ಯಕಲೆಯಾಗಿ ಘೋಷಿಸಿ, ಅದಕ್ಕೆ ಸೂಕ್ತ ಸ್ಥಾನಮಾನಗಳನ್ನು ನೀಡಬೇಕು. ಅಲ್ಲದೆ ಪ್ರಾಥಮಿಕ ಮತ್ತು ಪ್ರೌಢ ಮಟ್ಟದಲ್ಲಿ ಯಕ್ಷ ಶಿಕ್ಷಣಕ್ಕೆ ಅವಕಾಶ ನೀಡುವಂತೆ ಕರ್ನಾಟಕ ಸರಕಾರವನ್ನು ಆಗ್ರಹಿಸಲಾಯಿತು.
2.ಮಹಾರಾಷ್ಟ್ರ ಸರಕಾರವು ಯಕ್ಷಗಾನಕ್ಕೆ ಸಂಬಂಧಿಸಿ ಮುಂಬಯಿ ಮಹಾನಗರಿಯಲ್ಲಿ ಒಂದು ಪ್ರತ್ಯೇಕ ಆಕಾಡೆಮಿಯನ್ನು ಸ್ಥಾಪಿಸಬೇಕು.
3. ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳು ಮುಂಬಯಿ ಸಂಘ- ಸಂಸ್ಥೆಗಳು ನಡೆಸುವ ಯಕ್ಷಗಾನ ಚಟುವಟಿಕೆಗಳಿಗೆ ಮತ್ತು ಪ್ರದರ್ಶನಗಳಿಗೆ ವಿಶೇಷ ಅನುದಾನವನ್ನು ನೀಡಬೇಕು
4.ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಯಕ್ಷಗಾನ ಮೇಳಗಳನ್ನು ಹಾಗೂ ಕರಾವಳಿ ಮೂಲದ ಯಕ್ಷಗಾನ ಸಂಘಟನೆಗಳನ್ನು ಮತ್ತು ಸಂಘಟಕರನ್ನು ಪ್ರಶಸ್ತಿಗೆ ಪರಿಗಣಿಸಬೇಕು.
5.ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳು ಸಾಂಸ್ಕೃತಿಕ ಮತ್ತು ಕಲಾಗೌರವಗಳಿಗೆ ಯಕ್ಷಗಾನ ಕಲಾವಿದರನ್ನೂ ಪರಿಗಣಿಸುವುದರ ಜತೆಗೆ ಕಲಾವಿದರ ಕ್ಷೇಮಾಭಿವೃದ್ಧಿಗಾಗಿ ಸರಕಾರದಿಂದ ಲಭ್ಯವಾಗುವ ಸವಲತ್ತುಗಳನ್ನು ಯಕ್ಷಗಾನ ಕಲಾವಿದರಿಗೂ ವಿಸ್ತರಿಸಲು ಕೋರಲಾಯಿತು.
ದೇಶಾದ್ಯಂತ ಬಸ್ ಮತ್ತು ರೈಲು ಪ್ರಯಾಣದ ಸೌಲಭ್ಯವನ್ನು ಯಕ್ಷಗಾನ ಕಲಾವಿದರಿಗೆ ಉಚಿತವಾಗಿ ನೀಡಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ವಿನಂತಿಸಲಾಯಿತು.
ಮುಂಬಯಿಯಲ್ಲಿ ಕನ್ನಡ ಕಲಾವಿದರಿಗೆ ಲಭ್ಯವಾಗುವಂತೆ ಸುಸಜ್ಜಿತವಾದ ರಂಗ ಮಂದಿರ ಸಮುಚ್ಚಯವೊಂದನ್ನು ನಿರ್ಮಿಸಿ ಅದರಲ್ಲಿ ಅಜೆಕಾರು ಕಲಾಭಿಮಾನಿ ಬಳಗವು ಆಸಕ್ತ ಮಕ್ಕಳು ಮತ್ತು ಮಹಿಳೆಯರಿಗೆ ಯಕ್ಷಗಾನ ತರಬೇತಿ ನೀಡುವುದಕ್ಕೆ ಸೂಕ್ತ ಸ್ಥಳಾವಕಾಶವನ್ನು ಒದಗಿಸಿಕೊಡುವಂತೆ ಮಹಾರಾಷ್ಟ್ರಘನ ಸರಕಾರವನ್ನು ಈ ಸಮ್ಮೇಳನದಲ್ಲಿ ಒತ್ತಾಯಿಸಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ಸಾಧಕರಿಗೆ ಕಲಾ ಗೌರವ ಮತ್ತು ರಜತ ಯಕ್ಷರಕ್ಷಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಬಜ್ಪೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ್ ಎಲ್.ಶೆಟ್ಟಿ ಕರಂಬಾರು, ಯಕ್ಷಕಲಾರಂಗ ಕಾರ್ಕಳ ಇದರ ಅಧ್ಯಕ್ಷ ವಿಜಯ ಶೆಟ್ಟಿ ಕಾರ್ಕಳ, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ, ಬಂಟರ ಸಂಘ ಕ್ಯಾಟರಿಂಗ್ ಮತ್ತು ಡೆಕೋರೇಷನ್ ಸಮಿತಿಯ ಕಾರ್ಯಾಧ್ಯಕ್ಷ ಶಿವರಾಮ ಶೆಟ್ಟಿ ಕಾರ್ಯಾನಗುತ್ತು, ಸಮ್ಮೇಳನದ ಸಲಹೆಗಾರ ಡಾ.ಎಂ.ಪ್ರಭಾಕರ ಜೋಶಿ, ಪ್ರಧಾನ ಸಂಚಾಲಕ ಹಾಗೂ ‘ಯಕ್ಷಗಾನ ಮುಂಬೆಳಗು’ ಗ್ರಂಥದ ಪ್ರಧಾನ ಸಂಪಾದಕ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ, ಸಂಪಾದಕ ಮಂಡಳಿಯ ದೀವಿತ್ ಎಸ್. ಕೆ.ಪೆರಾಡಿ ಅವರನ್ನು ಪೇಟ ತೊಡಿಸಿ, ಗೌರವ ಫಲಕದೊಂದಿಗೆ ಸನ್ಮಾನಿಸಲಾಯ್ತು.
ಒಂದು ಸಂಸ್ಥೆಯನ್ನು ಕಟ್ಟಿ ಇಪ್ಪತ್ತೈದು ವರ್ಷಗಳ ಕಾಲ ಅದನ್ನು ಬೆಳೆಸುವುದು ಸುಲಭದ ಕೆಲಸವಲ್ಲ, ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಎಲ್ಲರ ಸಹಕಾರದಿಂದ, ದಾನಿಗಳ ಪ್ರೋತ್ಸಾಹದಿಂದ ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಅವರ ಅಭಿಮಾನಿಗಳು, ವಿದ್ಯಾರ್ಥಿಗಳು ಮುಂಬಯಿಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಅವರಿಂದ ಇನ್ನಷ್ಟು ಕಲಾ ಸೇವೆಯು ನಡೆಯುತ್ತಿರಲಿ.
-ಐಕಳ ಹರೀಶ್ ಶೆಟ್ಟಿ ಅಧ್ಯಕ್ಷ ಜಾಗತಿಕ ಬಂಟರ ಸಂಘಗಳ ಒಕ್ಕೂಟ
ಅಜೆಕಾರು ರಜತ ಯಕ್ಷರಕ್ಷಾ ಪ್ರಶಸ್ತಿ ಯನ್ನು ಹಿರಿಯ ಯಕ್ಷಗಾನ ಅರ್ಥದಾರಿ ಜಬ್ಬಾರ್ ಸಮೋ ಸಂಪಾಜೆ, ಮಾತೃಶ್ರೀ ರಜತ ಯಕ್ಷ ರಕ್ಷಾ ಪ್ರಶಸ್ತಿಯನ್ನು ಕನ್ನಡ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಮತ್ತು ಉದಯವಾಣಿಯ ಡಾ.ದಿನೇಶ್ ಶೆಟ್ಟಿ ರೆಂಜಾಳ ಅವರಿಗೆ ಹಾಗೂ ಸಾಧಕ ರಜತ ಯಕ್ಷರಕ್ಷಾ ಪ್ರಶಸ್ತಿಯನ್ನು ಹಿರಿಯ ಸಾಹಿತಿ, ಸಂಶೋಧಕ ಡಾ| ಕೆ. ಎಂ. ರಾಘವ ನಂಬಿಯಾರ್, ರಾಷ್ಟ್ರಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ನೀಡಿ ಗೌರವಿಸಲಾಯಿತು. ಯಕ್ಷಗಾನ ಸಂಘಟನೆಗಳಿಗೆ ನೀಡುವ ಗೌರವ ರಜತ ಯಕ್ಷರಕ್ಷಾ ಪ್ರಶಸ್ತಿ ಯನ್ನು ಯಕ್ಷಗಾನ ಕಲಾರಂಗ ಉಡುಪಿ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇವರಿಗೆ ನೀಡಲಾ ಯಿತು.ಇದೇ ಸಂದರ್ಭದಲ್ಲಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.
ಅಜೆಕಾರು ಕಲಾಭಿಮಾನಿ ಬಳಗದ ಸದಸ್ಯರು ಹಾಗೂ ಶಿಷ್ಯ ವೃಂದದ ವತಿಯಿಂದ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರನ್ನು ವೇದಿಕೆಯಲ್ಲಿ ಸಪತ್ನಿಕರಾಗಿ ಸಮ್ಮಾನಿಸಲಾಯಿತು.
ಬಂಟರ ಸಂಘದ ಜತೆ ಕೋಶಾಧಿಕಾರಿ ಶಶಿಧರ ಶೆಟ್ಟಿ ಇನ್ನಂಜೆ, ಜತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರು, ಉದ್ಯಮಿ ಆನಿಲ್ ಶೆಟ್ಟಿ ಏಳಿಂಜೆ, ಬಂಟರ ಸಂಘ ಮುಂಬಯಿ ಶಿಕ್ಷಣ, ಸಮಾಜ ಕಲ್ಯಾಣ ಸಮಿತಿಯ ಉಪಾಧ್ಯಕ್ಷ ಸುಬ್ಬಯ್ಯ ಶೆಟ್ಟಿ ಬಂಟರ ಸಂಘದ ಮಾಜಿ ಕಾರ್ಯದರ್ಶಿ ಸಿಎ ಸದಾಶಿವ ಶೆಟ್ಟಿ, ಪತ್ರಕರ್ತೆ ಮಮತಾ ಶೆಟ್ಟಿ ಪಾಲ್ಗೊಂಡು ಶುಭಹಾರೈಸಿದರು.
ಪ್ರಾರಂಭದಲ್ಲಿ ಸಮ್ಮೇಳನದ ಕಾರ್ಯಾಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅತಿಥಿ -ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಮಾರಂಭವನ್ನು ಶಿಕ್ಷಕಿ ಅಮೃತಾ ಎ. ಶೆಟ್ಟಿ ಮತ್ತು ಡಾ.ದಿನೇಶ್ ಶೆಟ್ಟಿ ರೆಂಜಾಳ ನಿರ್ವಹಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನ ಪ್ರೇಮಿಗಳು ಎರಡೂ ದಿನಗಳ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಮೇಳದ ಕಲಾವಿದರಿಂದ ‘ರುಕ್ಮಿಣಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ಜರಗಿತು.

