ಧರ್ಮ ಮತ್ತು ಕಾವ್ಯಕ್ಕೆ ಪ್ರಭುತ್ವದ ಹಂಗಿಲ್ಲ : ಧನಂಜಯ ಕುಂಬ್ಳೆ

0
21

ಮಂಗಳೂರು : ಧರ್ಮ ಮತ್ತು ಕಾವ್ಯದ ದಾರಿ ಮಾನವೀಯತೆಯೇ ಆಗಿದೆ. ಧಾರ್ಮಿಕ ಸಂಸ್ಥೆಗಳಿಗೆ ಪ್ರಭುತ್ವದ ರಕ್ಷಣೆ ಬೇಕು. ಕವಿಗಳಿಗೆ ಪ್ರಭುತ್ವದ ಆಶ್ರಯ ಬೇಕು. ಆದರೆ ಧರ್ಮ ಮತ್ತು ಕಾವ್ಯಕ್ಕೆ ಪ್ರಭುತ್ವದ ಹಂಗಿಲ್ಲ. ಮಾನವತೆಯ ಮೌಲ್ಯಗಳಿಗೆ ಧಕ್ಕೆಯಾದಾಗ ಪ್ರಭುತ್ವವನ್ನೂ ಇವು ಪ್ರಶ್ನಿಸುತ್ತವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ ಹೇಳಿದರು.

ಅವರು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಮಂಗಳೂರಿನ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆದ ಮಂಗಳೂರು ದಸರಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದೆ ಉರಿಯಿಲ್ಲದ ಊರಿತ್ತು. ಸಾಮರಸ್ಯ, ನೆಮ್ಮದಿಯ ಸಮಾಜವಿತ್ತು. ಆದರೆ ಇಂದು ಊರಿಡೀ ಅಸಹನೆಯ ಉರಿಯಿದೆ. ನಮ್ಮ ಊರಿಗೆ ಬೆಂಕಿ ಇಟ್ಟವರ್ಯಾರು ಎಂಬುದನ್ನು ನಾವು ಹುಡುಕಬೇಕಿದೆ. ಕವಿ, ಕಲಾವಿದರಿಗೆ ಈ ಸಾಮಾಜಿಕ ಎಚ್ಚರ ಅಗತ್ಯ ಎಂದರು. ಬಳಿಕ ಕನವರಿಕೆ ಹಾಗೂ ಬೆರಳ ತುದಿ ಮೇಲೆ ಕವಿತೆಗಳನ್ನು ವಾಚಿಸಿದರು.

ಕವಿಗೋಷ್ಠಿಯಲ್ಲಿ ಕವಿಗಳಾದ ಜ್ಯೋತಿ ಗುರುಪ್ರಸಾದ್, ರಾಧಾಕೃಷ್ಣ ಕೆ ಉಳಿಯತ್ತಡ್ಕ, ದೀವಿತ್ ಎಸ್ ಕೆ ಪೆರಾಡಿ, ಜ್ಯೋತಿ ಚೇಳೈರ್, ರಾಧೇಶ್ ತೋಳ್ಪಾಡಿ, ಸುಲೋಚನ ಪಚ್ಚಿನಡ್ಕ, ಚೇತನ್ ವರ್ಕಾಡಿ, ಲತೀಶ್ ಎಂ.ಸಂಕೊಳಿಗೆ, ದಿವಾಕರ ಕೊಕ್ಕಡ, ವಿಶ್ವನಾಥ ಕುಲಾಲ್ ಮಿತ್ತೂರು ಭಾಗವಹಿಸಿದ್ದರು.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಜೈರಾಜ್ ಎಚ್ ಸೋಮಸುಂದರಂ, ಕ್ಷೇತ್ರಾಭಿವೃದ್ಧಿ ಸಮಿತಿ ಮುಖಂಡ ವೇದಕುಮಾರ್, ಮುಖಂಡರಾದ ಪದ್ಮರಾಜ್ ಪೂಜಾರಿ, ಟ್ರಸ್ಟಿಗಳಾದ ಕೃತಿ ಡಿ ಅಮೀನ್, ಕಿಶೋರ್ ಕುಮಾರ್ ದಂಡಕೇರಿ ಉಪಸ್ಥಿತರಿದ್ದರು. ಕಾಸರಗೋಡಿನ ಪೆರಿಯ ಕೇಂದ್ರೀಯ ವಿವಿಯ ಪ್ರಾಧ್ಯಾಪಕ ಚೇತನ್ ಮುಂಡಾಜೆ ಆಶಯ ಭಾಷಣ ಮಾಡಿದರು. ಚೈತ್ರ ಕಬ್ಬಿನಾಲೆ ನಿರೂಪಿಸಿದರು. ದಿನೇಶ್ ಸುವರ್ಣ ದಸರಾ ನಿಮಿತ್ತ ಏರ್ಪಡಿಸಿದ ಕಥೆ, ಕವನ ಸ್ಪರ್ಧಾ ವಿಜೇತರ ಪಟ್ಟಿಯನ್ನು ವಾಚಿಸಿದರು.