ಅರಣ್ಯದಲ್ಲಿ ಗುಂಡಿನ ಸದ್ದು : ಕಾಡುಪ್ರಾಣಿಯ ಬೇಟೆ ಶಂಕೆ

0
76

ಕಡಬ : ಹಿಂದೆ ಬೃಹತ್ ಕಾಡುಕೋಣವನ್ನು ಬೇಟೆಯಾಡಿ ಸಾಗಿಸಿದ ಘಟನೆಯಿಂದ ರಾಜ್ಯಾದ್ಯಂತ ಸುದ್ದಿಯಾಗಿದ್ದ ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಐತ್ತೂರು ಭಾಗದಲ್ಲಿ ಮತ್ತೆ ಅಕ್ರಮ ಬೇಟೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸುಬ್ರಹ್ಮಣ್ಯ ಮತ್ತು ಪಂಜ ವಲಯ ಅರಣ್ಯಗಳ ಗಡಿ ಭಾಗವಾದ ಮತ್ತೂರು–ನೆಕ್ಕಿಲಾಡಿ ಗಡಿಯ ಮಾಯಿಪಾಜೆಯ ಗಬ್ಬರ್ ತೋಟದಲ್ಲಿ ಮುಂಜಾನೆ ಕಾಡುಪ್ರಾಣಿಯೊಂದನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮುಂಜಾನೆ ಮೂರು ಗಂಟೆಗೆ ಕೇಳಿಬಂದ ಗುಂಡಿನ ಸದ್ದು

ಲಭ್ಯವಾದ ಮಾಹಿತಿಯ ಪ್ರಕಾರ, ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಮಾಯಿಪಾಜೆಯ ರಬ್ಬರ್ ತೋಟದಲ್ಲಿ ಸತತ ಮೂರು ಬಾರಿ ಗುಂಡಿನ ಸದ್ದು ಕೇಳಿಬಂದಿದೆ ಎನ್ನಲಾಗಿದೆ. ಬಳಿಕ ಸ್ಥಳೀಯರು ಪರಿಶೀಲಿಸಿದಾಗ, ಕಾಡುಪ್ರಾಣಿಯೊಂದು ಗುಂಡೇಟಿಗೆ ಒಳಗಾಗಿ ಒದ್ದಾಡಿದ ಗುರುತುಗಳು, ರಕ್ತದ ಕಲೆಗಳು ಹಾಗೂ ಬಂದೂಕಿನ ಗುಂಡಿನ ಕವರ್‌ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಬೇಟೆಗಾರರ ತಂಡವು ಕಾಡುಹಂದಿ ಅಥವಾ ಜಿಂಕೆಯನ್ನು ಗುರಿಯಾಗಿಸಿಕೊಂಡು ಬೇಟೆಯಾಡಿ, ಬಳಿಕ ಪ್ರಾಣಿಯನ್ನು ಅಲ್ಲಿಂದ ಸಾಗಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಬೇಟೆಯಾಡಲಾದ ಪ್ರಾಣಿ ಯಾವುದು ಮತ್ತು ಘಟನೆಗೆ ಸಂಬಂಧಿಸಿದವರು ಯಾರು ಎಂಬುದು ಇನ್ನೂ ದೃಢಪಟ್ಟಿಲ್ಲ.

ಕಾಡುಕೋಣ ಹತ್ಯೆಯ ಘಟನೆ ಮರುಕಳಿಸುವ ಆತಂಕ

ಇದೇ ಐತ್ತೂರು ಅರಣ್ಯ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಬೃಹತ್ ಕಾಡುಕೋಣದ ಹತ್ಯೆ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಆ ಸಂದರ್ಭದಲ್ಲಿ ತನಿಖೆ ಹಾಗೂ ಕಠಿಣ ಕ್ರಮಗಳ ಭರವಸೆ ನೀಡಲಾಗಿತ್ತು. ಇದೀಗ ಮತ್ತೊಮ್ಮೆ ಅಕ್ರಮ ಬೇಟೆಯ ಶಂಕೆ ವ್ಯಕ್ತವಾಗಿರುವುದು ಅರಣ್ಯ ಪ್ರದೇಶಗಳಲ್ಲಿನ ಭದ್ರತೆ ಮತ್ತು ರಾತ್ರಿ ಗಸ್ತಿನ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವಲಯಕ್ಕೆ ಸೇರಿದ ಈ ಭಾಗದಲ್ಲಿ ವನ್ಯಜೀವಿಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪರಿಸರಾಸಕ್ತರು ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಆರೋಪ

ಐತ್ತೂರು, ನೆಕ್ಕಿಲಾಡಿ, ಪಂಜ ಹಾಗೂ ಬಿಳಿನೆಲೆ ಗಡಿ ಭಾಗಗಳಲ್ಲಿ ಕಾಡುಪ್ರಾಣಿಗಳ ಬೇಟೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅರಣ್ಯಾಧಿಕಾರಿಗಳು ಸಮರ್ಪಕ ಗಸ್ತು ನಡೆಸುತ್ತಿಲ್ಲ ಹಾಗೂ ಅಕ್ರಮ ಬೇಟೆಗಾರರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರುಗಳೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿವೆ. ಸ್ಥಳೀಯ ಅರಣ್ಯ ಸಿಬ್ಬಂದಿಯ ವಿರುದ್ಧವೂ ಕೆಲವರು ಗಂಭೀರ ಆರೋಪಗಳನ್ನು ಮಾಡಿದ್ದು, ಈ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಿದೆ.

‘ಮಾಹಿತಿ ಬಂದಿಲ್ಲ, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’

ಘಟನೆ ಕುರಿತು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಚೇತನ್ ಅವರನ್ನು ಸಂಪರ್ಕಿಸಿದಾಗ, ಇಲಾಖೆಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳದಲ್ಲಿ ರಕ್ತದ ಕಲೆಗಳು ಮತ್ತು ಗುಂಡಿನ ಕವರ್‌ಗಳು ಪತ್ತೆಯಾಗಿವೆ ಎನ್ನಲಾದ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿ, ಅಕ್ರಮ ಬೇಟೆ ನಡೆದಿದೆಯೇ ಎಂಬುದನ್ನು ಖಚಿತಪಡಿಸಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ. ವನ್ಯಜೀವಿಗಳ ರಕ್ಷಣೆಗಾಗಿ ರಾತ್ರಿ ಗಸ್ತು ಬಲಪಡಿಸಿ, ತಪ್ಪಿತಸ್ಥರು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.