ಬೆಳ್ತಂಗಡಿ : ಸಾಮಾಜಿಕ ಜಾಲತಾಣಗಳಲ್ಲಿ ಛಾಯಾಗ್ರಾಹಕರ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ ಆರೋಪದ ಹಿನ್ನೆಲೆಯಲ್ಲಿ, ಯೂಟ್ಯೂಬರ್ ಶಿಲ್ಪ ಶೆಟ್ಟಿ ಮಂಗಳೂರು ಅವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಅಕ್ಟೋಬರ್ 13ರಂದು ಬೆಳ್ತಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.
ಛಾಯಾಗ್ರಹಣವು ಕೌಶಲ್ಯ, ಪರಿಶ್ರಮ, ತಾಂತ್ರಿಕ ಜ್ಞಾನ ಹಾಗೂ ವೃತ್ತಿಪರ ಬದ್ಧತೆಯನ್ನು ಒಳಗೊಂಡ ವೃತ್ತಿಯಾಗಿದೆ. ಇಂತಹ ವೃತ್ತಿಯಲ್ಲಿರುವ ಛಾಯಾಗ್ರಾಹಕರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ಪ್ರಕಟಿಸುವುದರಿಂದ ವೃತ್ತಿಪರ ಸಮುದಾಯದ ಗೌರವಕ್ಕೆ ಧಕ್ಕೆಯಾಗುವುದರ ಜೊತೆಗೆ ಛಾಯಾಗ್ರಾಹಕರ ಮನಸ್ಸಿಗೆ ನೋವುಂಟಾಗುತ್ತದೆ ಎಂದು ಸಂಘದ ಪದಾಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಹೇಳಿಕೆಗಳು ವ್ಯಾಪಕವಾಗಿ ಹರಡುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟವರನ್ನು ವಿಚಾರಣೆಗೊಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಛಾಯಾಗ್ರಾಹಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಬೆಳ್ತಂಗಡಿ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಒತ್ತಾಯಿಸಲಾಯಿತು.

