ಕಾಸರಗೋಡಿನಲ್ಲಿ ನ. 28, 29ರಂದು 8ನೇ ಕನ್ನಡ ಸಮ್ಮೇಳನ : ಮಕ್ಕಳ ಸಾಹಿತ್ಯ ಉತ್ಸವ, ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ

0
15

ಕಾಸರಗೋಡು: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಇದರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಕೇರಳ ರಾಜ್ಯ ಘಟಕ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ–2026, ಕೇರಳ–ಕರ್ನಾಟಕ ಉತ್ಸವ ಹಾಗೂ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವವನ್ನು ನವೆಂಬರ್ 28 ಮತ್ತು 29ರಂದು ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ 36ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ ನಡೆಯಲಿರುವ ಈ ಸಮ್ಮೇಳನದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ವಿವಿಧ ಭಾಷಾ ಸಮುದಾಯಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಎರಡು ದಿನಗಳ ಸಮ್ಮೇಳನದಲ್ಲಿ ಅಂತರರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿ, ಚುಟುಕು ಕವಿಗೋಷ್ಠಿ, ಮಕ್ಕಳ ಕವಿಗೋಷ್ಠಿ, ರಾಜ್ಯಮಟ್ಟದ ಜಾನಪದ ಗೋಷ್ಠಿ, ಮಾಧ್ಯಮ ಗೋಷ್ಠಿ ಹಾಗೂ ಗಡಿನಾಡು, ಹೊರನಾಡು ಮತ್ತು ಅನಿವಾಸಿ ಕನ್ನಡಿಗರ ನಡುವಿನ ಭಾಷಾ ಬಾಂಧವ್ಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ಎಂಟು ರಾಜ್ಯಗಳ ಕನ್ನಡ ಸಂಘಟನೆಗಳ ಪದಾಧಿಕಾರಿಗಳು, ಸಾಂಸ್ಕೃತಿಕ ಪ್ರತಿನಿಧಿಗಳು, ಕವಿಗಳು, ಸಾಹಿತಿಗಳು, ಕಲಾವಿದರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ವಿವಿಧ ಸಾಂಸ್ಕೃತಿಕ ಸಂಘಟನೆಗಳ ಸುಮಾರು 200 ಕಲಾವಿದರು ವೈವಿಧ್ಯಮಯ ಕಲಾ ಪ್ರದರ್ಶನಗಳನ್ನು ನೀಡಲಿದ್ದಾರೆ.

ಮಕ್ಕಳ ಸಾಹಿತ್ಯ ಉತ್ಸವ: ವಿದ್ಯಾರ್ಥಿಗಳಿಗೆ ಕಥೆ–ಕವನ ಸ್ಪರ್ಧೆ

ನವೆಂಬರ್ 29ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವ ನಡೆಯಲಿದೆ. ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಕಥೆ–ಕವನ ಸ್ಪರ್ಧೆ, ಮಕ್ಕಳ ಕವಿಗೋಷ್ಠಿ, ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿ ಮತ್ತು ಮಕ್ಕಳ ಸಾಹಿತ್ಯ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ವಿವಿಧ ಗೋಷ್ಠಿಗಳಿಗೆ ವಿದ್ಯಾರ್ಥಿಗಳೇ ಅಧ್ಯಕ್ಷತೆ ವಹಿಸುವ ಅವಕಾಶವನ್ನೂ ಕಲ್ಪಿಸಲಾಗಿದೆ.

ವಿದ್ಯಾರ್ಥಿಗಳ ಸ್ವರಚಿತ ಕಥೆ ಮತ್ತು ಕವನಗಳನ್ನು ಆಹ್ವಾನಿಸಲಾಗಿದ್ದು, ಈ ಹಿಂದೆ ಪತ್ರಿಕೆಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರಬಾರದು. ಕಥೆಗಳು ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿರಬೇಕು. ಕಥೆಗೆ ಕೈಬರಹದಲ್ಲಿ ಗರಿಷ್ಠ ಐದು ಪುಟಗಳ ಮಿತಿ ಹಾಗೂ ಕವನಕ್ಕೆ ಹತ್ತು ಸಾಲುಗಳ ಮಿತಿ ನಿಗದಿಪಡಿಸಲಾಗಿದೆ. ಅಂಚೆ ಕಾರ್ಡ್‌ನಲ್ಲಿ ಕಥೆ ಮತ್ತು ಚುಟುಕು ಬರೆಯುವ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿದೆ.

ಇದರೊಂದಿಗೆ ಚಿತ್ರಕಲೆ, ರಸಪ್ರಶ್ನೆ, ಸಣ್ಣಕಥೆ ವಾಚನ, ಕನ್ನಡ ಪತ್ರಿಕೆ ಓದುವ ಸ್ಪರ್ಧೆ, ಭಾಷಣ, ಏಕಪಾತ್ರಾಭಿನಯ ಹಾಗೂ ಮಕ್ಕಳ ಕುಣಿತ ಭಜನೆ ಸೇರಿದಂತೆ ಹಲವು ಸ್ಪರ್ಧೆಗಳು ನಡೆಯಲಿವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳ ತಂಡಗಳಿಗೆ ಸಮೂಹ ಕನ್ನಡ ಗೀತಗಾಯನ ಮತ್ತು ಸಮೂಹ ನೃತ್ಯ ಪ್ರದರ್ಶನಕ್ಕೂ ಅವಕಾಶ ನೀಡಲಾಗುತ್ತದೆ. ಆಯ್ಕೆಯಾದ ಬರಹಗಾರರು ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದು, ಸ್ಪರ್ಧಾ ವಿಜೇತರಿಗೆ ಪ್ರಶಂಸನಾ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ.

ಸಂಘಟನೆಗಳ ವಿಳಾಸ ಸಂಗ್ರಹಕ್ಕೆ ಮನವಿ

ಸಮ್ಮೇಳನದ ಆಮಂತ್ರಣ ಪತ್ರಿಕೆಗಳನ್ನು ಅಂಚೆ ಮೂಲಕ ಕಳುಹಿಸುವ ಉದ್ದೇಶದಿಂದ ಕೇರಳ ರಾಜ್ಯದ, ವಿಶೇಷವಾಗಿ ಕಾಸರಗೋಡು ಜಿಲ್ಲೆಯ ಕನ್ನಡ, ತುಳು ಹಾಗೂ ಬಹುಭಾಷಾ ಕವಿಗಳು, ಸಾಹಿತಿಗಳು, ಕಲಾವಿದರು, ಮಾಧ್ಯಮ ಪ್ರತಿನಿಧಿಗಳು ಮತ್ತು ಸಾಹಿತ್ಯಾಸಕ್ತರು ತಮ್ಮ ಹೆಸರು, ಪೂರ್ಣ ವಿಳಾಸ, ಮೊಬೈಲ್ ಹಾಗೂ ವಾಟ್ಸ್‌ಆ್ಯಪ್ ಸಂಖ್ಯೆಯನ್ನು ಕಳುಹಿಸುವಂತೆ ಕೋರಲಾಗಿದೆ.

ಅಲ್ಲದೆ, ಕನ್ನಡ, ತುಳು ಹಾಗೂ ವಿವಿಧ ಭಾಷಾ ಸಮುದಾಯಗಳ ಸಂಘ-ಸಂಸ್ಥೆಗಳು, ಭಜನಾ ಮಂಡಳಿಗಳು, ಶಾಲಾ-ಕಾಲೇಜುಗಳ ವಿಳಾಸ, ಸಂಪರ್ಕ ವಿವರಗಳು, ಸಂಸ್ಥೆಯ ಪರಿಚಯ ಹಾಗೂ ಪದಾಧಿಕಾರಿಗಳ ಮಾಹಿತಿಯನ್ನು ಸಂಗ್ರಹಿಸಿ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಸಂಘಟನೆಗಳ ವಿಳಾಸದ ಪರಿಷ್ಕೃತ ನಿರ್ದೇಶಿಕೆಯನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ.

ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲು ಆಸಕ್ತರು ತಮ್ಮ ವಿವರಗಳನ್ನು ಮುಂಚಿತವಾಗಿ ಅಂಚೆ ಮೂಲಕ ಕಳುಹಿಸಬಹುದು. ಮಕ್ಕಳ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ನವೆಂಬರ್ 10ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಸಂಬಂಧಪಟ್ಟ ಶಾಲೆ ಅಥವಾ ಕಾಲೇಜಿನ ಮುಖ್ಯಸ್ಥರ ದೃಢೀಕರಣ ಪತ್ರ ಹಾಗೂ ಅಗತ್ಯ ವಿವರಗಳನ್ನು ಸಲ್ಲಿಸಬೇಕು. ಭಾಗವಹಿಸುವವರಿಗೆ ಉಪಾಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಇರಲಿದ್ದು, ಪ್ರಯಾಣ ವೆಚ್ಚವನ್ನು ಸ್ವತಃ ಭರಿಸಬೇಕಾಗುತ್ತದೆ.

ಸಂಪರ್ಕಕ್ಕಾಗಿ: ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಪಾರೆಕಟ್ಟೆ–ಕನ್ನಡ ಗ್ರಾಮ ರಸ್ತೆ, ಕಾಸರಗೋಡು–671121. ಮೊಬೈಲ್: 9448572016, 9901951965