ಮೊಬೈಲ್‌ಗೆ ಬಂದ ಸಂದೇಶಕ್ಕೆ ‘OK’ ಕ್ಲಿಕ್: ಖಾತೆಯಿಂದ ₹2.40 ಲಕ್ಷ ಗುಳುಂ

0
38

ಪುತ್ತೂರು : ಮೊಬೈಲ್‌ನಲ್ಲಿ ಸಿಸ್ಟಮ್ ಅಪ್‌ಡೇಟ್ ಮಾಡುವಂತೆ ಬಂದ ಸಂದೇಶಕ್ಕೆ ‘OK’ ಕ್ಲಿಕ್ ಮಾಡಿದ ಪರಿಣಾಮ ಮೊಬೈಲ್ ಹ್ಯಾಕ್ ಆಗಿ, ಬ್ಯಾಂಕ್ ಖಾತೆಯಿಂದ ₹2.40 ಲಕ್ಷ ಹಣ ವರ್ಗಾವಣೆಯಾದ ಘಟನೆ ವರದಿಯಾಗಿದೆ.

ಪಾಣಾಜೆ ನಿವಾಸಿ ಮಹಮ್ಮದ್ ಕುನ್ನಿ ಅವರು ಸೈಬರ್ ವಂಚನೆಗೆ ಒಳಗಾದ ವ್ಯಕ್ತಿಯಾಗಿದ್ದು, ಈ ಕುರಿತು ಮಂಗಳೂರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

2026ರ ಸೆಪ್ಟೆಂಬರ್ 29ರಂದು ಅವರ ಮೊಬೈಲ್ ಪರದೆಯಲ್ಲಿ ಸಿಸ್ಟಮ್ ಅಪ್‌ಡೇಟ್‌ಗಾಗಿ ‘OK’ ಕ್ಲಿಕ್ ಮಾಡುವಂತೆ ಸಂದೇಶ ಕಾಣಿಸಿಕೊಂಡಿತ್ತು. ಅದನ್ನು ರದ್ದುಗೊಳಿಸಲು ಪ್ರಯತ್ನಿಸಿದರೂ ‘Cancel’ ಆಯ್ಕೆ ಲಭ್ಯವಾಗದ ಕಾರಣ ಅನಿವಾರ್ಯವಾಗಿ ‘OK’ ಕ್ಲಿಕ್ ಮಾಡಿದ್ದರು. ಇದಾದ ಬಳಿಕ ಮಾಲ್‌ವೇರ್ ಅಪ್ಲಿಕೇಶನ್ ಡೌನ್‌ಲೋಡ್ ಆಗಿ ಮೊಬೈಲ್ ಹ್ಯಾಕ್ ಆಗಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಬಳಿಕ ಬೆಟ್ಟಂಪಾಡಿಯ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿರುವ ತಮ್ಮ ಬ್ಯಾಂಕ್ ಖಾತೆಯಿಂದ ₹50,000 ಕಡಿತಗೊಂಡಿರುವ ಬಗ್ಗೆ ಸಂದೇಶ ಬಂದಿತ್ತು. ಗೂಗಲ್ ಪೇ ಮೂಲಕ ಖಾತೆಯನ್ನು ಪರಿಶೀಲಿಸಿದಾಗ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 1ರವರೆಗೆ ಒಟ್ಟು ₹2,40,000 ಹಣ ಅಪರಿಚಿತರ ಖಾತೆಗೆ ವರ್ಗಾವಣೆಯಾಗಿರುವುದು ತಿಳಿದುಬಂದಿದೆ.

ತಮ್ಮ ಹಣವನ್ನು ವಂಚನೆಯಿಂದ ವರ್ಗಾಯಿಸಿಕೊಂಡಿರುವ ಅಪರಿಚಿತರ ವಿರುದ್ಧ ಕಾನೂನು ಕ್ರಮ ಕೈಗೊಂಡು ಹಣ ವಾಪಸ್ ಪಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮಹಮ್ಮದ್ ಕುನ್ನಿ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.

ಸಾರ್ವಜನಿಕರಿಗೆ ಎಚ್ಚರಿಕೆ: ಮೊಬೈಲ್‌ನಲ್ಲಿ ಅಪರಿಚಿತ ಸಿಸ್ಟಮ್ ಅಪ್‌ಡೇಟ್ ಸಂದೇಶಗಳು ಅಥವಾ ಲಿಂಕ್‌ಗಳು ಕಾಣಿಸಿಕೊಂಡಾಗ ಎಚ್ಚರಿಕೆ ವಹಿಸಿ. ಅನುಮಾನಾಸ್ಪದ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ, ಅಪರಿಚಿತ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ಹಣ ಕಡಿತಗೊಂಡಿರುವುದು ಗಮನಕ್ಕೆ ಬಂದ ತಕ್ಷಣ ಬ್ಯಾಂಕ್‌ಗೆ ಮಾಹಿತಿ ನೀಡಿ, ಸೈಬರ್ ವಂಚನೆ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿ.