ಸುರತ್ಕಲ್ : ಓದುವಿಕೆ ಎಂಬುದು ಸೃಜನಶೀಲ ಮತ್ತು ಸಂಕಿರ್ಣ ಪ್ರಕ್ರಿಯೆಯಾಗಿದೆ. ಸಾಹಿತಿ ಸೃಷ್ಟಿಸಿದ ಕೃತಿಯನ್ನು ಓದುಗ ತನ್ನ ಪ್ರತಿಭಾ ಶಕ್ತಿಯಿಂದ ಮರು ಸೃಷ್ಟಿಗೊಳಿಸುತ್ತಾನೆ. ಶಿವರಾಮ ಕಾರಂತರು ಕನ್ನಡ ಲೋಕಕ್ಕೆ ವಿಶಿಷ್ಟ ಕೊಡುಗೆಗಳನ್ನು ನೀಡಿದ್ದು ಅವುಗಳ ಮರು ಓದು ವಿಶಿಷ್ಟ ಅನುಭವಗಳನ್ನು ನೀಡುತ್ತದೆ ಎಂದು ಹಿರಿಯ ಕವಿ ಪ್ರೊ. ರಘುರಾಮ ರಾವ್ ಬೈಕಂಪಾಡಿ ನುಡಿದರು.
ಅವರು ಸಾಹಿತ್ಯ ಆಪ್ತರ ಬಳಗ ಸುರತ್ಕಲ್ ನ ವಿವೇಕಾನಂದ ಗ್ರಂಥಾಲಯದಲ್ಲಿ ಹಮ್ಮಿಗೊಂಡಿದ್ದ ಶಿವರಾಮ ಕಾರಂತರ ಹುಟ್ಟುಹಬ್ಬದ ಸಲುವಾಗಿ,’ನಾನು ಕಂಡಂತೆ ಕಾರಂತ -ಮಾತುಕತೆ ಮತ್ತು ಕವಿತಾ ವಾಚನ ‘ ದಲ್ಲಿ ಮಾತನಾಡಿದರು.
ಕವಿ ರಘು ಇಡ್ಕಿದು ಮಾತನಾಡಿ ಮಕ್ಕಳ ಮನಸ್ಸನ್ನು ಅರಳಿಸುವ ಸರಳ ಸುಂದರ ಕಥನ ಮಾದರಿಯ ಬಾಲ ಕವಿತೆಗಳನ್ನು ಶಿವರಾಮ ಕಾರಂತರು ಬರೆದು ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಸೃಷ್ಟಿಯ ಅಗತ್ಯ ಎಂದರು.
ಕಲ್ಲಚ್ಚು ಪ್ರಕಾಶನದ ಮಹೇಶ ಆರ್. ನಾಯಕ್ ಅವರು ಶಿವರಾಮ ಕಾರಂತರು ವಿಪುಲ ಅನುಭವ ಮತ್ತು ವಿಶಾಲವಾದ ಆಸಕ್ತಿಗಳ ಕ್ಷೇತ್ರಗಳ ಕುರಿತು ಬರೆದರು ಎಂದರು.
ಚೇಳಾಯಿರು ಸರಕಾರಿ ಪದವಿ ಪೂರ್ವ ಕಾಲೇಜು ನ ಪ್ರಾಂಶುಪಾಲೆ ಡಾ ಜ್ಯೋತಿ ಚೇಳಾಯಿರು ಮಾತನಾಡಿ ಶಿವರಾಮ ಕಾರಂತರ ಕಾರ್ಯ ಸಾಧನೆಯಲ್ಲಿ ಪತ್ನಿ ಲೀಲಾ ಕಾರಂತರ ಪಾತ್ರವು ಹಿರಿದಾಗಿದೆ. ಶಿವರಾಮ ಕಾರಂತ ರ ಮಕ್ಕಳು ಬರೆದ ಪುಸ್ತಕ ವು ಹೊಸ ಆಯಾಮದಿಂದ ಕಾರಂತರನ್ನು ಕಾಣಲು ಪ್ರೇರಿಪಿಸುತ್ತದೆ ಎಂದರು.
ಹಿರಿಯ ಟಿ. ವಿ.ನಿರೂಪಕ ಪ್ರಕಾಶ್ ಪುತ್ತೂರು ಮಾತನಾಡಿ ಸ್ವ ಅನ್ವೇಷಣೆ, ಸ್ವ ಪ್ರಯೋಗ ಗಳ ಮೂಲಕ ಕಾರಂತರಿಗೆ ಅಸಾಧಾರಣಾ ಸಾಧನೆ ನಡೆಸಲು ಸಾಧ್ಯವಾಯಿತು ಎಂದರು.
ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಮಾಲತಿ ಶೆಟ್ಟಿ ಮಾಣುರು, ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಕೋಶಾಧಿಕಾರಿ ಎನ್. ಸುಬ್ರಾಯ ಭಟ್, ಕವಿ ವೆಂಕಟೇಶ್ ಗಟ್ಟಿ ಕವನಗಳನ್ನು ವಾಚಿಸಿದರು.
ವಿವೇಕಾನಂದ ಗ್ರಂಥಾಲಯ ಸಮಿತಿಯ ಕೃಷ್ಣ ಮೂರ್ತಿ ಸುರತ್ಕಲ್ ಸ್ವಾಗತಿಸಿದರು. ರಮೇಶ್ ಶೆಟ್ಟಿ ಕುಳಾಯಿ ವಂದಿಸಿದರು.

