ವಿಶೇಷ ಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಮೋದಿಯವರ ಆಶಯ: ಕೆ. ವಿಜಯ ಕೊಡವೂರು

0
22

ಉಡುಪಿ : ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಆರ್ಥಿಕ ಪ್ರಕೋಷ್ಠದ ವತಿಯಿಂದ, ನರೇಂದ್ರ ಮೋದಿಯವರ 25 ವರ್ಷಗಳ ಆಡಳಿತದ ಸೇವಾ ಸಂಕಲ್ಪದ ಅಂಗವಾಗಿ ವಿಜೇತ ವಸತಿಯುತ ವಿಶೇಷ ಶಾಲೆಗೆ ಭೇಟಿ ನೀಡಿ ಅರ್ಥಪೂರ್ಣ ಸಮಾಜಮುಖಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಲ್ಲಾ ಪ್ರಕೋಷ್ಠಗಳ ಸಹ ಸಂಚಾಲಕರಾದ ಕೆ. ವಿಜಯ ಕೊಡವೂರು, ನರೇಂದ್ರ ಮೋದಿಯವರು ತಮ್ಮ ಆಡಳಿತಾವಧಿಯಲ್ಲಿ ವಿಶೇಷ ಚೇತನರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ವಿಶೇಷ ಚೇತನರು ಸ್ವಾವಲಂಬಿ ಜೀವನ ನಡೆಸಲು ಮತ್ತು ಸಮಾಜದ ಮುಖ್ಯವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸುವುದು ಅವರ ಆಶಯವಾಗಿದೆ ಎಂದು ತಿಳಿಸಿದರು.

ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಚರಂಡಿ ಹಾಗೂ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಸೀಮಿತವಲ್ಲ. ಸಮಾಜದಲ್ಲಿ ಸಂಕಷ್ಟದಲ್ಲಿರುವ ವಿಶೇಷ ಚೇತನರು ಹಾಗೂ ದಿವ್ಯಾಂಗರನ್ನು ಗುರುತಿಸಿ, ಅವರಿಗೆ ಅಗತ್ಯ ನೆರವು ನೀಡಿ, ಅವರ ಬದುಕಿಗೆ ಆಸರೆಯಾಗುವುದೂ ನಿಜವಾದ ಅಭಿವೃದ್ಧಿಯಾಗಿದೆ. ಇಂತಹ ಮಾನವೀಯ ಮೌಲ್ಯಗಳನ್ನು ಸಾಕಾರಗೊಳಿಸುವ ಉದ್ದೇಶದಿಂದ ನರೇಂದ್ರ ಮೋದಿಯವರ ಆಶಯದಂತೆ ವಿವಿಧ ಪ್ರಕೋಷ್ಠಗಳ ವತಿಯಿಂದ ಮುಂದಿನ ದಿನಗಳಲ್ಲಿಯೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ್ ನಾಯಕ್ ಮತ್ತು ರೇಷ್ಮಾ ಉದಯ ಶೆಟ್ಟಿ, ಕಾರ್ಕಳ ಮಂಡಲ ಅಧ್ಯಕ್ಷರಾದ ನವೀನ್ ನಾಯಕ್, ಆರ್ಥಿಕ ಪ್ರಕೋಷ್ಠದ ರಾಜ ಎನ್. ಸಾಲ್ಯಾನ್, ರಮಾನಂದ ಹಾಗೂ ಕುಲದೀಪ್ ಉಪಸ್ಥಿತರಿದ್ದರು.