ಮಂಗಳೂರು ಸೋಮನಾಥ ದೇವಾಲಯದಲ್ಲಿ ಮೊಳಗಿದ ಭಕ್ತಿಸಂಗೀತದ ನಿನಾದ

0
7

ಭಟ್ಕಳ : ಶರನ್ನವರಾತ್ರಿ ಉತ್ಸವದ ನಾಲ್ಕನೇ ದಿನವಾದ ಬುಧವಾರ ಮಂಗಳೂರಿನ ನೀರೇಶ್ವಾಲ್ಯದ ಐತಿಹಾಸಿಕ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಶಾರದಾಂಬಾ ದೇವಿಯ ಸನ್ನಿಧಿಯಲ್ಲಿ ಉಮೇಶ ಮೇಸ್ತ ಹಾಗೂ ಉಮೇಶ ಮುಂಡಳ್ಳಿ ಬಳಗದವರಿಂದ ಭಕ್ತಿಸಂಗೀತ ಕಾರ್ಯಕ್ರಮ ನಡೆಯಿತು.

ಉಡುಪಿ ಜಿಲ್ಲೆಯ ಖ್ಯಾತ ಕಲಾವಿದ ಉಮೇಶ ಮೇಸ್ತ ಅವರು ಹಾರ್ಮೋನಿಯಂ ಸಾಥ್ ನೀಡುವುದರೊಂದಿಗೆ ಅನೇಕ ದೇವಿ ಭಕ್ತಿಗೀತೆಗಳನ್ನು ಹಾಡಿ ಭಕ್ತರ ಮನಸೂರೆಗೊಂಡರು. ರಾಜ್ಯ ಪ್ರಶಸ್ತಿ ಪುರಸ್ಕೃತ ಸುಗಮಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರು ‘ಭಾಗ್ಯದ ಲಕ್ಷ್ಮೀ ಬಾರಮ್ಮ’, ‘ಜಗದಂಬೆ ದೇವಿ ಭವಾನಿ’ ಮೊದಲಾದ ಜನಪ್ರಿಯ ಭಕ್ತಿಗೀತೆಗಳನ್ನು ಹಾಡಿ ಭಕ್ತಿಭಾವದ ವಾತಾವರಣವನ್ನು ಸೃಷ್ಟಿಸಿದರು.

ಗಾಯನದಲ್ಲಿ ಮಂಗಳೂರಿನ ಸವಿತಾ ಸುರೇಶ್ ಹಾಗೂ ಶಿರೂರಿನ ಕುಮಾರ್ ಸುದರ್ಶನ ಅವರು ಸಾಥ್ ನೀಡಿದರು. ಶ್ಯಾಮ್ ಶಿರೂರು ಅವರು ರಿದಂ ಪ್ಯಾಡ್‌ನಲ್ಲಿ ಹಾಗೂ ಸುಧಾಮ್ ಶಿರೂರು ಅವರು ತಬಲಾದಲ್ಲಿ ಸಹಕರಿಸಿ ಕಾರ್ಯಕ್ರಮಕ್ಕೆ ಸಂಗೀತದ ಮೆರುಗು ನೀಡಿದರು.

ಶಾರದಾಂಬಾ ದೇವಿಯ ಸನ್ನಿಧಿಯಲ್ಲಿ ನಡೆದ ಈ ಭಕ್ತಿಸಂಗೀತ ಕಾರ್ಯಕ್ರಮ ಭಕ್ತರಲ್ಲಿ ಆಧ್ಯಾತ್ಮಿಕ ಭಾವನೆ ಮೂಡಿಸಿತು. ಕಾರ್ಯಕ್ರಮದ ಕೊನೆಯಲ್ಲಿ ದೇವಸ್ಥಾನದ ವತಿಯಿಂದ ಎಲ್ಲಾ ಕಲಾವಿದರಿಗೆ ಶಾಲು ಹೊದಿಸಿ ಗೌರವಿಸಲಾಯಿತು.