ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಸಂಚಾಲಕರಾಗಿ ಲುಕ್ಮಾನ್ ಬಂಟ್ವಾಳ್ ನೇಮಕ

0
8

ಬಂಟ್ವಾಳ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಸಂಚಾಲಕರಾಗಿ ಲುಕ್ಮಾನ್ ಬಂಟ್ವಾಳ್ ಅವರನ್ನು ನೇಮಕ ಮಾಡಲಾಗಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಈ ನೇಮಕಾತಿ ಆದೇಶ ಹೊರಡಿಸಿದ್ದಾರೆ.

ಲುಕ್ಮಾನ್ ಬಂಟ್ವಾಳ್ ಅವರು ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಹಾಗೂ ಬಂಟ್ವಾಳ ಪುರಸಭೆಯ ನಿಕಟಪೂರ್ವ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಅವರಿಗೆ ರಾಜ್ಯಮಟ್ಟದ ಸಂಘಟನೆಯ ಜವಾಬ್ದಾರಿ ವಹಿಸಲಾಗಿದೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಮುಖ ಸಂಘಟನೆಗಳಲ್ಲಿ ಒಂದಾದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯು ಗ್ರಾಮೀಣ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಪಕ್ಷದ ಸಂಘಟನಾತ್ಮಕ ಸಂಪರ್ಕವನ್ನು ವೃದ್ಧಿಸುವ ಉದ್ದೇಶ ಹೊಂದಿದೆ.

ಭಾರತೀಯ ಸಂವಿಧಾನದ 73ನೇ ಮತ್ತು 74ನೇ ತಿದ್ದುಪಡಿಗಳ ಕುರಿತು ಜಾಗೃತಿ ಮೂಡಿಸುವುದು, ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆಯ ಮಹತ್ವವನ್ನು ಜನರಿಗೆ ತಿಳಿಸುವುದು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಕಾರ್ಯವೈಖರಿಯಲ್ಲಿ ಜನಪ್ರತಿನಿಧಿಗಳ ಪಾತ್ರವನ್ನು ಬಲಪಡಿಸುವುದು ಸಂಘಟನೆಯ ಪ್ರಮುಖ ಉದ್ದೇಶಗಳಾಗಿವೆ.

ಲುಕ್ಮಾನ್ ಬಂಟ್ವಾಳ್ ಅವರಿಗೆ ರಾಜ್ಯ ಸಂಚಾಲಕರ ಜವಾಬ್ದಾರಿ ದೊರೆತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರಲ್ಲಿ ಗಮನ ಸೆಳೆದಿದೆ. ರಾಜ್ಯಮಟ್ಟದಲ್ಲಿ ಸಂಘಟನೆಯ ಚಟುವಟಿಕೆಗಳನ್ನು ವಿಸ್ತರಿಸುವಲ್ಲಿ ಅವರ ಮುಂದಿನ ಕಾರ್ಯವೈಖರಿ ಮಹತ್ವ ಪಡೆದುಕೊಳ್ಳಲಿದೆ.