ನಕ್ರೆ: ಅನನ್ಯ ಸಾಧಕ, ಸಾತ್ವಿಕ ವ್ಯಕ್ತಿತ್ವದ ಸಜ್ಜನ ಶಾಮಣ್ಣನವರ ಜೀವನದ ಯಶೋಗಾಥೆಯನ್ನು ಸಾರುವ ‘ಶರಧಿ’ ಕೃತಿಯು ಓದುಗರ ಮುಂದೆ ಬರಲು ಸಜ್ಜಾಗಿದೆ. ಕಿರಿಯರಿಗೆ ಸ್ಫೂರ್ತಿ ನೀಡುವಂತಹ ಶಾಮಣ್ಣನವರ ಜೀವನಗಾಥೆಯನ್ನು ಲೇಖಕ ಡಾ. ದಿನೇಶ್ ರೆಂಜಾಳ ಅವರು ತಮ್ಮ ಅಕ್ಷರ ಚಾತುರ್ಯದ ಮೂಲಕ ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಈ ಕೃತಿಯ ಬಿಡುಗಡೆ ಸಮಾರಂಭವನ್ನು ಸಾಮಾನ್ಯ ಕಾರ್ಯಕ್ರಮವಾಗಿ ನಡೆಸದೆ, ದೈವಿಕತೆ, ಸಂಗೀತ ಹಾಗೂ ಸಾಹಿತ್ಯದ ಸೊಗಡಿನಿಂದ ವಿಶೇಷವಾಗಿ ರೂಪಿಸುವ ಆಶಯವನ್ನು ಆಯೋಜಕರು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಇಡೀ ಐಲೇಸಾ ತಂಡವು ನಕ್ರೆಗೆ ಆಗಮಿಸಿ ಕಾರ್ಯಕ್ರಮಕ್ಕೆ ಸಂಗೀತಮಯ ಹಾಗೂ ಸಾಹಿತ್ಯಮಯ ಮೆರುಗು ನೀಡಲಿದೆ.
ಶಾಮಣ್ಣನವರ ಆದರ್ಶಮಯ ಬದುಕು, ಸಾಧನೆ ಮತ್ತು ಸಾತ್ವಿಕ ವ್ಯಕ್ತಿತ್ವವನ್ನು ಪರಿಚಯಿಸುವ ‘ಶರಧಿ’ ಕೃತಿಯು ಯುವಪೀಳಿಗೆಗೆ ಪ್ರೇರಣೆಯಾಗುವ ನಿರೀಕ್ಷೆಯಿದೆ. ಕೃತಿಯ ಬಿಡುಗಡೆಯ ಮೂಲಕ ವ್ಯಕ್ತಿತ್ವದ ಮೌಲ್ಯಗಳು ಹಾಗೂ ಜೀವನಾನುಭವಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ನಡೆಯಲಿದೆ.
“ನಾವು ಬರುವಾಗ ನೀವು ಇರದೇ ಇರುವುದು ಚಂದಾನಾ? ದಯವಿಟ್ಟು ಬರಬೇಕು!” ಎಂಬ ಆತ್ಮೀಯ ಆಹ್ವಾನದೊಂದಿಗೆ ಐಲೇಸಾ ತಂಡವು ಸಾಹಿತ್ಯಾಸಕ್ತರು, ಸಂಗೀತಪ್ರೇಮಿಗಳು ಹಾಗೂ ಸಾರ್ವಜನಿಕರನ್ನು ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದೆ.
