ಅ.18ರಂದು ಇಸ್ಕಾನ್ – ಐಲೇಸಾ ಸಹಯೋಗದ ತುಳು ಭಗವದ್ಗೀತೆ ಬಿಡುಗಡೆ

0
28

ಮಂಗಳೂರು : ಐಲೇಸಾ ಇಸ್ಕಾನ್ ಸಂಸ್ಥೆಯ ಜೊತೆ ಸೇರಿಕೊಂಡು ವಿಶ್ವ ತುಳು ಸಂಘಟಕ ಅಬುಧಾಬಿಯ ಸರ್ವೋತ್ತಮ ಶೆಟ್ರ ನೇತೃತ್ವದಲ್ಲಿ “ತುಳುವ ಜಾಲ್ಡ್ ಕೃಷ್ಣ ಪಾರ್ದನ” ಎಂಬ ಅಮೋಘ ಭಾಗವತ ಸಪ್ತಾಹ ಕಾರ್ಯಕ್ರಮವನ್ನು 2021 ರಲ್ಲಿ ಸತತ ಏಳು ದಿನಗಳ ಕಾಲ ಝೂಮ್ ವೇದಿಕೆಯಲ್ಲಿ ಮಾಡಿದಾಗ ಇಸ್ಕಾನ್ ಸಂಸ್ಥೆಗೆ ತುಳುವಿನಲ್ಲೂ ಭಗವದ್ಗೀತೆ ಪುಸ್ತಕವನ್ನು ಪ್ರಕಟಿಸುವಂತೆ ಕೇಳಿಕೊಂಡಿತ್ತು.

ಅದರಂತೆ ತುಳು ಭಾಷಿಗರ ಭಾಗವತ ಸಪ್ತಾಹದ ಅಭಿಮಾನಕ್ಕೆ ಮನಸೋತ ಇಸ್ಕಾನ್ ಸಂಸ್ಥೆ ಆವತ್ತು ತುಳುವಿನಲ್ಲಿ ಭಗವದ್ಗೀತೆಯನ್ನು ಪ್ರಪಂಚದಾದ್ಯಂತ ಪ್ರಕಟಿಸುವ ಭರವಸೆ ನೀಡಿತ್ತು. ಆ ಭರವಸೆ ಈಗ ಈಡೇರಿದೆ.

ಸುಮಾರು ಐದು ವರ್ಷಗಳ ದೀರ್ಘಕಾಲ ಕನ್ನಡದ ಭಗವದ್ಗೀತೆಯ ತುಳು ಅನುವಾದ ಹಲವರ ಪರಿಶ್ರಮದ ಫಲವಾಗಿ ಸಿದ್ಧಗೊಂಡಿದೆ.ಬಿಡುಗಡೆಯ ಈ ಸಂದರ್ಭದಲ್ಲಿ ಶ್ರಮಿಸಿದ ಎಲ್ಲರನ್ನೂ ಸ್ಮರಿಸುವ ಸಲುವಾಗಿ ಇಸ್ಕಾನ್ ಶ್ರೀ ಶ್ರೀ ರಾಧಾ ಗೋವಿಂದ ಮಂದಿರ ಕುಲಾಯಿ ಸುರತ್ಕಲ್ ಇಲ್ಲಿ 18-10-2026 ರಂದು ಅನಾವರಣ ಮತ್ತು ಅಭಿನಂದನಾ ಕಾರ್ಯಕ್ರಮ ಏರ್ಪಡಿಸಿದ್ದು ಬೆಳಿಗ್ಗೆ 11:30 ಗಂಟೆಯಿಂದ 2:00 ಗಂಟೆಯವರೆಗೆ ನಡೆಯಲಿದೆ.

ಸಾಂದೀಪನಿ ಸಾಧನಾಶ್ರಮ ಶ್ರೀ ಕ್ಷೇತ್ರ ಕೇಮಾರು ಇಲ್ಲಿಯ ಶ್ರೀ ಶ್ರೀ ಈಶ ವಿಠಲ ದಾಸ ಸ್ವಾಮೀಜಿಯವರ ಆಶಿರ್ವಚನದೊಂದಿಗೆ ನಡೆಯುವ ಈ ಸಭೆಯಲ್ಲಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ವಿಶ್ವ ತುಳು ಸಂಘಟಕ ಸರ್ವೋತ್ತಮ ಶೆಟ್ಟಿ ಅಬುಧಾಬಿ, ನಿಟ್ಟೆಯ ನಿಕಟಪೂರ್ವ ಕುಲಪತಿ ಡಾ.ಸತೀಶ್ಚಂದ್ರಕುಮಾರ್ ಭಂಡಾರಿ,ನಿಟ್ಟೆ ಡಾ. ಕೆ ಆರ್ ಶೆಟ್ಟಿ ತುಳು ಅಧ್ಯಯನ‌ ಕೇಂದ್ರದ ಮುಖ್ಯಸ್ಥೆ ಡಾ. ಸಾಯಿಗೀತಾ ಹೆಗ್ಡೆ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಸಂದರ್ಭ ಕೃತಿ ರಚನೆಯಲ್ಲಿ ವಿಶೇಷ ಆಸ್ಥೆ ಮತ್ತು ಅಸಕ್ತಿ ತೋರಿದ ಮುಂಬೈಯ ಚಂದ್ರಾವತಿ ಪೂಜಾರಿ, ಬೆಂಗಳೂರಿನ ಕೃಷ್ಣದಾಸ ರೈ, ಆಮೇರಿಕಾದ ಶ್ರೀವಲ್ಲಿ ರೈ ಮಾರ್ಟೆಲ್, ಮಂಗಳೂರಿನ ರೂಪಕಲಾ ಆಳ್ವ, ಯಶೋದಾ ಮೋಹನ್ ಮತ್ತು ಐಲೇಸಾದ ಸದಸ್ಯರನ್ನು ಗೌರವಿಸಲಾಗುವುದು. ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಮಾರೋಪವಾಗಲಿದ್ದು ಎಲ್ಲಾ ತುಳು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆಮಂತ್ರಿಸಲಾಗಿದೆ.