ಉಡುಪಿ : ಮದುವೆಯ ಬಳಿಕ ಪತಿಯಿಂದ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗಿದೆ ಎಂದು ಪತ್ನಿ ನೀಡಿದ ದೂರಿನ ಮೇರೆಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಡೊಂಗರಕೇರಿಯ ಮೇಘನಾ (37) ಅವರು ದೂರು ನೀಡಿದ ಮಹಿಳೆಯಾಗಿದ್ದಾರೆ. ಇವರಿಗೆ 2022ರ ಏಪ್ರಿಲ್ 25ರಂದು ಪ್ರಣಾಮ್ ಎಂಬವರೊಂದಿಗೆ ಮಂಗಳೂರಿನ ಸಾಯಿ ಪ್ಯಾಲೇಸ್ನಲ್ಲಿ ನಿಶ್ಚಿತಾರ್ಥ ನಡೆದಿತ್ತು. 2022ರ ಸೆಪ್ಟೆಂಬರ್ 5ರಂದು ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ಸಭಾಭವನದಲ್ಲಿ ವಿವಾಹ ನೆರವೇರಿದ್ದು, ಸೆಪ್ಟೆಂಬರ್ 7ರಂದು ಟಿಎಂಎ ಪೈ ಹಾಲ್ನಲ್ಲಿ ಆರತಕ್ಷತೆ ನಡೆದಿತ್ತು.
ದೂರಿನ ಪ್ರಕಾರ, ಮದುವೆಯ ಸುಮಾರು 13 ಲಕ್ಷ ರೂ. ವೆಚ್ಚವನ್ನು ಮೇಘನಾ ಅವರ ತಾಯಿಯೇ ಭರಿಸಿದ್ದರು. ಅಲ್ಲದೆ, ವರನಿಗೆ ವಜ್ರದ ಉಂಗುರ, ಚಿನ್ನದ ಸರ ಹಾಗೂ ಚಿನ್ನದ ಬ್ರೇಸ್ಲೈಟ್ ಉಡುಗೊರೆಯಾಗಿ ನೀಡಲಾಗಿತ್ತು ಎನ್ನಲಾಗಿದೆ.
ಮದುವೆಯ ಬಳಿಕ ಮಲ್ಪೆಯಲ್ಲಿರುವ ಪತಿಯ ಮನೆಯಲ್ಲಿ ವಾಸವಾಗಿದ್ದಾಗ ಪ್ರಣಾಮ್ ಅವರು ವಿನಾಕಾರಣ ಗಲಾಟೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಮೇಘನಾ ಆರೋಪಿಸಿದ್ದಾರೆ. ಪತಿಯ ತಂದೆ ನಾರಾಯಣ ಶೆಟ್ಟಿ ಮತ್ತು ತಾಯಿ ಶಶಿಕಲಾ ಅವರು ಈ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದರು ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿದೇಶದಲ್ಲಿದ್ದ ಸಂದರ್ಭದಲ್ಲಿಯೂ ಪತಿ ಕೈಯಿಂದ ಹೊಡೆದು ನಿಂದಿಸಿ ಹಿಂಸೆ ನೀಡಿದ್ದಾಗಿ ಮೇಘನಾ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2026ರ ಅಡಿಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 498(ಎ), 323, 504 ಹಾಗೂ 34ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣದಲ್ಲಿ ಉಲ್ಲೇಖಿಸಲಾದ ಆರೋಪಗಳು ದೂರುದಾರರ ಆರೋಪಗಳಾಗಿದ್ದು, ತನಿಖೆಯ ಬಳಿಕ ಸತ್ಯಾಸತ್ಯತೆ ತಿಳಿದುಬರಬೇಕಿದೆ.

