ಉಪ್ಪಿನಂಗಡಿ ಬಸ್ ನಿಲ್ದಾಣದ ಮೇಲೆ ಕುಸಿದ ತಡೆಗೋಡೆ

0
35

ಉಪ್ಪಿನಂಗಡಿ : ಬಸ್ ನಿಲ್ದಾಣದ ಸಮೀಪದಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿಯ ಆವರಣ ತಡೆಗೋಡೆ ಪ್ರಯಾಣಿಕರ ತಂಗುದಾಣದ ಮೇಲೆ ಕುಸಿದು ಬಿದ್ದ ಘಟನೆ ಶನಿವಾರ ರಾತ್ರಿ ನಡೆದಿದ್ದು, ಅದೃಷ್ಟವಶಾತ್ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಿಎಸ್‌ಎನ್‌ಎಲ್ ಕಚೇರಿ ಹಾಗೂ ಟವರ್ ಇರುವ ಪ್ರದೇಶದ ಸುರಕ್ಷತೆಗಾಗಿ ಎಂಟು ಅಡಿಗಿಂತಲೂ ಎತ್ತರದ ಆವರಣ ಗೋಡೆಯನ್ನು ನಿರ್ಮಿಸಲಾಗಿತ್ತು. ಆದರೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗೋಡೆಯ ಬುಡ ದುರ್ಬಲಗೊಂಡಿದ್ದು, ಶನಿವಾರ ರಾತ್ರಿ ಏಕಾಏಕಿ ಕುಸಿದು ಪಕ್ಕದಲ್ಲಿದ್ದ ಬಸ್ ನಿಲ್ದಾಣದ ಪ್ರಯಾಣಿಕರ ತಂಗುದಾಣದ ಮೇಲೆ ಬಿದ್ದಿದೆ.

ಗೋಡೆ ಕುಸಿದಾಗ ಭಾರೀ ಶಬ್ದ ಉಂಟಾಗಿದ್ದು, ಇದರಿಂದ ಬೆಚ್ಚಿಬಿದ್ದ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ತಕ್ಷಣವೇ ಅಲ್ಲಿಂದ ಓಡಿಹೋಗಿ ಅಪಾಯದಿಂದ ಪಾರಾಗಿದ್ದಾರೆ. ಗೋಡೆಯ ಒಂದು ಭಾಗ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಉಳಿದ ಬಹುಭಾಗ ಸ್ಥಳದಲ್ಲಿದ್ದ ಬೃಹತ್ ಜಾಹೀರಾತು ಫಲಕದ ಕಬ್ಬಿಣದ ಕಂಬದ ಆಧಾರದಲ್ಲಿ ವಾಲಿ ನಿಂತಿದೆ. ಈ ಗೋಡೆಯು ಯಾವುದೇ ಕ್ಷಣದಲ್ಲಿ ಸಂಪೂರ್ಣವಾಗಿ ಕುಸಿದು ತಂಗುದಾಣದ ಕಟ್ಟಡಕ್ಕೆ ಮತ್ತಷ್ಟು ಹಾನಿ ಉಂಟುಮಾಡುವ ಸಾಧ್ಯತೆ ಇರುವುದರಿಂದ ಆತಂಕ ಸೃಷ್ಟಿಯಾಗಿದೆ.

ಇದೇ ವೇಳೆ, ಪ್ರಯಾಣಿಕರು ವಿಶ್ರಾಂತಿ ಪಡೆಯುವ ತಂಗುದಾಣದ ಮುಂಭಾಗದಲ್ಲಿರುವ ಎಲ್ಲಾ ಪಿಲ್ಲರ್‌ಗಳ ಬುಡವೂ ಸಂಪೂರ್ಣವಾಗಿ ಟೊಳ್ಳಾಗಿದ್ದು, ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿರುವುದನ್ನು ಸ್ಥಳೀಯ ಉದ್ಯಮಿಯೊಬ್ಬರು ಮಾಧ್ಯಮದ ಗಮನಕ್ಕೆ ತಂದಿದ್ದಾರೆ. ಪ್ರಯಾಣಿಕರ ವಿಶ್ರಾಂತಿ ಕೊಠಡಿಯೂ ಅಪಾಯದ ಸ್ಥಿತಿಯಲ್ಲಿರುವುದು ಕಂಡುಬಂದಿದೆ.

ಪ್ರತಿದಿನ ನೂರಾರು ಪ್ರಯಾಣಿಕರು ಸಂಚರಿಸುವ ಹಾಗೂ ಬಸ್ಸಿಗಾಗಿ ಕಾಯುವ ಈ ಪ್ರದೇಶದಲ್ಲಿ ತಂಗುದಾಣದ ಕಟ್ಟಡವೇ ಅಪಾಯದ ಅಂಚಿನಲ್ಲಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಕುಸಿಯುವ ಹಂತದಲ್ಲಿರುವ ಗೋಡೆಯನ್ನು ತೆರವುಗೊಳಿಸುವುದರ ಜೊತೆಗೆ ತಂಗುದಾಣದ ಕಟ್ಟಡದ ಸುರಕ್ಷತೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.