ಹ್ಯೂಸ್ಟನ್‌ನಲ್ಲಿ ಶ್ರೀಕೃಷ್ಣ ವೃಂದಾವನದ ಭೂಮಿ ಸಮರ್ಪಣೆ

0
15

ಅಮೆರಿಕ–ಭಾರತ ಒಂದಾದರೆ ವಿಶ್ವಕ್ಕೆ ಒಳಿತು: ಪುತ್ತಿಗೆ ಶ್ರೀಗಳು

ಹ್ಯೂಸ್ಟನ್ : ಹ್ಯೂಸ್ಟನ್‌ನ ಶ್ರೀಕೃಷ್ಣ ವೃಂದಾವನದ ನೂತನ ದೇವಾಲಯ ನಿರ್ಮಾಣಕ್ಕಾಗಿ ಸುಮಾರು ಎಂಟು ಎಕರೆ ಭೂಮಿ ಸಮರ್ಪಣೆ ಹಾಗೂ ಗುರುವಂದನಾ ಸಮಾರಂಭವು ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯದಲ್ಲಿ ಶನಿವಾರ ಭಕ್ತಿ–ಸಂಭ್ರಮದಿಂದ ನಡೆಯಿತು.

ಶ್ರೀಪಾದರು ಹಾಗೂ ಗಣ್ಯರನ್ನು ಕುದುರೆ ಸಾರೋಟಿನಲ್ಲಿ ಎಂಟು ಎಕರೆ ಪ್ರದೇಶದ ಸುತ್ತ ಕರೆದೊಯ್ದು ಸ್ಥಳದ ಪರಿವೀಕ್ಷಣೆ ಮಾಡಿಸಲಾಯಿತು. ಹುಲಿವೇಷ ಮತ್ತು ಕೋಲಾಟದೊಂದಿಗೆ ಶ್ರೀಪಾದರನ್ನು ವೇದಿಕೆಗೆ ಸ್ವಾಗತಿಸಲಾಯಿತು. ಶ್ರೀಪಾದರು ಗಣ್ಯರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ರಾಜೇಶ್ವರಿ ಪಳಗದ ಅವರ ನೇತೃತ್ವದಲ್ಲಿ ಮಹಿಳೆಯರು ಶ್ರೀ ಪುತ್ತಿಗೆ ಮಠದ ಗುರುಪರಂಪರೆಯ ಸ್ತುತಿಯನ್ನು ಸುಶ್ರಾವ್ಯವಾಗಿ ಹಾಡಿದರು.

ಆಶೀರ್ವಚನ ನೀಡಿದ ಶ್ರೀಪಾದರು, “ವಾಮನನು ಬಲಿಚಕ್ರವರ್ತಿಯಿಂದ ಮೂರು ಹೆಜ್ಜೆ ಭೂಮಿಯನ್ನು ಕೇಳಿದನು. ಇಂದು ಭಕ್ತರು ಶ್ರೀಕೃಷ್ಣ ಮತ್ತು ಶ್ರೀವೆಂಕಟೇಶ್ವರ ದೇವಾಲಯಕ್ಕಾಗಿ ಎಂಟು ಎಕರೆ ಭೂಮಿಯನ್ನು ಸಮರ್ಪಿಸಿದ್ದಾರೆ. ಭೂದಾನ ಮತ್ತು ದೇವಾಲಯ ನಿರ್ಮಾಣದಲ್ಲಿ ಪಾಲ್ಗೊಳ್ಳುವುದು ಜೀವನದಲ್ಲಿ ದೊರೆಯುವ ಅಪರೂಪದ ಪುಣ್ಯಾವಕಾಶ” ಎಂದರು.

“ನಾವು ದೇವಾಲಯ ನಿರ್ಮಿಸುತ್ತಿರುವ ಈ ಸ್ಥಳದ ಸುತ್ತಮುತ್ತ ಚರ್ಚ್, ಮಸೀದಿ, ಬೌದ್ಧ ಮಂದಿರ ಹಾಗೂ ವಿವಿಧ ಹಿಂದೂ ದೇವಾಲಯಗಳಿವೆ. ಇದು ‘ವಸುದೈವ ಕುಟುಂಬಕಂ’ ಎಂಬ ಸನಾತನ ಧರ್ಮದ ಸಂದೇಶಕ್ಕೆ ಸಾಕ್ಷಿಯಾಗಿದೆ. ಇಲ್ಲಿ ನಿರ್ಮಾಣವಾಗುವ ದೇವಾಲಯವು ಸರ್ವಧರ್ಮ ಸಮರಸತೆ ಮತ್ತು ಆಧ್ಯಾತ್ಮಿಕ ಏಕತೆಯ ಪ್ರತೀಕವಾಗಲಿದೆ” ಎಂದು ತಿಳಿಸಿದರು.

ಸುಮಾರು 15 ಮಿಲಿಯನ್ ಡಾಲರ್ ವೆಚ್ಚದ ಯೋಜನೆಯಲ್ಲಿ 1,000 ಆಸನಗಳ ಸಭಾಂಗಣ, 370 ಕಾರುಗಳಿಗೆ ಪಾರ್ಕಿಂಗ್ ಹಾಗೂ 100 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ವ್ಯವಸ್ಥೆ ಕಲ್ಪಿಸುವ ಯೋಜನೆಯಿದೆ. ಶ್ರೀ ಪುತ್ತಿಗೆ ವಿದ್ಯಾಪೀಠವನ್ನು ಸ್ಥಾಪಿಸಿ ಅಮೆರಿಕದಲ್ಲಿಯೇ ವೇದ, ಆಗಮ ಮತ್ತು ಅರ್ಚಕ ಶಿಕ್ಷಣ ನೀಡುವ ಉದ್ದೇಶವಿದೆ. ಈ ಕೇಂದ್ರವು ಧಾರ್ಮಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿ ಬೆಳೆಯಲಿದೆ ಎಂದು ಶ್ರೀಗಳು ಹೇಳಿದರು.

“ಇಂದಿನ AI ಎಂದರೆ America and India. ಅಮೆರಿಕ ಮತ್ತು ಭಾರತ ಒಂದಾದರೆ ಇಡೀ ವಿಶ್ವಕ್ಕೆ ಒಳಿತಾಗುತ್ತದೆ. ಜನರು ಹ್ಯೂಸ್ಟನ್‌ಗೆ ನಾಸಾ ವೀಕ್ಷಿಸಲು ಬರುವಂತೆ, ಈ ದೇವಾಲಯದ ದರ್ಶನಕ್ಕೂ ಬರುವಂತಾಗಬೇಕು” ಎಂದು ಶ್ರೀಗಳು ಆಶಿಸಿದರು.

ಶ್ರೀಮತಿ ಜಮುನಾ ಮತ್ತು ಶ್ರೀ ಬಿ.ಎನ್. ಮುರಳಿ ದಂಪತಿ ದೇವಾಲಯ ನಿರ್ಮಾಣಕ್ಕಾಗಿ ಎಂಟು ಎಕರೆ ಭೂಮಿಯನ್ನು ಸಮರ್ಪಿಸಿದ ಸಂಕೇತವಾಗಿ ಭೂದಾನದ ಫಲಕವನ್ನು ಪೂಜ್ಯ ಶ್ರೀಪಾದರಿಗೆ ಅರ್ಪಿಸಿದ್ದು ಸಮಾರಂಭದ ವಿಶೇಷವಾಗಿತ್ತು. ಸುಮಾರು 1.9 ಮಿಲಿಯನ್ ಡಾಲರ್ ಮೌಲ್ಯದ ಭೂಮಿ ಖರೀದಿಗೆ ಸಹಕರಿಸಿದ ಹ್ಯೂಸ್ಟನ್ ಜೈನ್ ಸೊಸೈಟಿ, ಒಂದು ಮಿಲಿಯನ್ ಡಾಲರ್ ದೇಣಿಗೆ ನೀಡಿದ ಗೀತಾ ರಾಮರಾವ್ ಮತ್ತು ಶ್ರೀ ರಾಮರಾವ್ ದಂಪತಿ, ಜಮುನಾ ಮತ್ತು ಬಿ.ಎನ್. ಮುರಳಿ ದಂಪತಿ ಹಾಗೂ ಇತರ ದಾನಿಗಳನ್ನು ಶ್ರೀಗಳು ಅಭಿನಂದಿಸಿ ಆಶೀರ್ವದಿಸಿದರು.

ನಗರದ ಮೇಯರ್ ಅವರು ಪೂಜ್ಯ ಶ್ರೀಪಾದರಿಗೆ ಅಧಿಕೃತ ಗೌರವಪತ್ರ ನೀಡಿ ಗುರುವಂದನೆ ಸಲ್ಲಿಸಿದರು. ಭಾರತದ ಹ್ಯೂಸ್ಟನ್ ಕಾನ್ಸುಲ್ ಜನರಲ್ ಡಿ.ಸಿ. ಮಂಜುನಾಥ್, ಫೋರ್ಟ್ ಬೆಂಡ್ ಕೌಂಟಿ ಕಮಿಷನರ್ ಆ್ಯಂಡಿ ಮೇಯರ್ಸ್, ನ್ಯಾಯಾಧೀಶ ಡೇನಿಯಲ್ ವಾಂಗ್ ಹಾಗೂ ಟೆಕ್ಸಾಸ್‌ನ 240ನೇ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರನ್ ಪಟ್ಟೇಲ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ವಿಎಚ್‌ಪಿ ಪ್ರತಿನಿಧಿ ಎನ್.ಎ. ಜೋಶಿಪುರ ನೇತೃತ್ವದ ನಿಯೋಗವು ಪೂಜ್ಯ ಶ್ರೀಪಾದರಿಂದ ಆಶೀರ್ವಾದ ಪಡೆಯಿತು. ಇಸ್ಕಾನ್, ವ್ಯಾಸ ಸಮೂಹ, ಚಿನ್ಮಯ ಮಿಷನ್, ಸ್ವಾಮಿನಾರಾಯಣ ಮಂದಿರ ಹಾಗೂ ಅಷ್ಟಲಕ್ಷ್ಮೀ ದೇವಸ್ಥಾನ ಸೇರಿದಂತೆ ಹಲವು ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆಗಳ ಮುಖಂಡರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು.

ಉಜ್ವಲಾ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಬಿ.ಎನ್. ಮುರಳಿ ಅವರು ಆಗಮಿಸಿದ ಗಣ್ಯರು ಹಾಗೂ ಎಲ್ಲರನ್ನು ಸ್ವಾಗತಿಸಿದರು. ಸಂತೋಷ್ ಅವರು ಭೂದಾನದ ಮಹತ್ವವನ್ನು ವಿವರಿಸಿ, ದೇವಾಲಯ ನಿರ್ಮಾಣಕ್ಕೆ ಸಹಕರಿಸುವಂತೆ ಭಕ್ತರನ್ನು ಪ್ರೇರೇಪಿಸಿದರು. ಕೀರ್ತಿ ನೀಲಮಣಿ ಅವರು ಆಗಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಹ್ಯೂಸ್ಟನ್ ಮತ್ತು ಅಮೆರಿಕದ ಸಾಮಾಜಿಕ–ಸಾಂಸ್ಕೃತಿಕ ಬದುಕಿನಲ್ಲಿ ಭಾರತೀಯ ಸಮುದಾಯದ ಮಹತ್ವವನ್ನು ಗುರುತಿಸಿ, ಸಮಾರಂಭದಲ್ಲಿ ಪಾಲ್ಗೊಂಡ ಗಣ್ಯರು, ಸಂಘಟನೆಗಳ ಪ್ರತಿನಿಧಿಗಳು, ದಾನಿಗಳು, ಭಕ್ತರು ಹಾಗೂ ಸ್ವಯಂಸೇವಕರಿಗೆ ಶ್ರೀಕೃಷ್ಣ ವೃಂದಾವನದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು. ಸುಮಾರು 300ಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದ ಭೂಮಿ ಸಮರ್ಪಣೆ ಮತ್ತು ಗುರುವಂದನಾ ಸಮಾರಂಭವು ಯಶಸ್ವಿಯಾಗಿ ನೆರವೇರಿತು.