ಇಸ್ಕಾನ್–ಐಲೇಸಾ ಸಹಯೋಗದಲ್ಲಿ ತುಳು ಭಗವದ್ಗೀತೆ ಬಿಡುಗಡೆ

0
18

ಐದು ವರ್ಷಗಳ ಪರಿಶ್ರಮಕ್ಕೆ ಫಲ; ತುಳು ಭಾಷೆಯಲ್ಲಿ ಭಗವದ್ಗೀತೆ ಅನಾವರಣ

ಮಂಗಳೂರು: ತುಳು ಭಾಷೆಯಲ್ಲಿ ಭಗವದ್ಗೀತೆಯನ್ನು ಪ್ರಕಟಿಸುವ ಮೂಲಕ ತುಳುನಾಡಿನ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಗೆ ಮತ್ತೊಂದು ಮಹತ್ವದ ಕೊಡುಗೆ ನೀಡಲಾಗಿದೆ. ಇಸ್ಕಾನ್ ಮತ್ತು ಐಲೇಸಾ ಸಹಯೋಗದಲ್ಲಿ ಸಿದ್ಧಗೊಂಡಿರುವ ತುಳು ಭಗವದ್ಗೀತೆಯ ಅನಾವರಣ ಹಾಗೂ ಈ ಮಹತ್ವದ ಕಾರ್ಯಕ್ಕೆ ಶ್ರಮಿಸಿದವರ ಅಭಿನಂದನಾ ಕಾರ್ಯಕ್ರಮವು ಅಕ್ಟೋಬರ್ 18ರಂದು ಕುಳಾಯಿ ಸುರತ್ಕಲ್‌ನ ಇಸ್ಕಾನ್ ಶ್ರೀ ಶ್ರೀ ರಾಧಾ ಗೋವಿಂದ ಮಂದಿರದಲ್ಲಿ ನಡೆಯಿತು.

2021ರಲ್ಲಿ ಐಲೇಸಾ ಸಂಸ್ಥೆಯ ಸಹಯೋಗದೊಂದಿಗೆ ವಿಶ್ವ ತುಳು ಸಂಘಟಕ ಅಬುಧಾಬಿಯ ಸರ್ವೋತ್ತಮ ಶೆಟ್ಟಿ ಅವರ ನೇತೃತ್ವದಲ್ಲಿ “ತುಳುವ ಜಾಲ್ಡ್ ಕೃಷ್ಣ ಪಾರ್ದನ” ಎಂಬ ಭಾಗವತ ಸಪ್ತಾಹ ಕಾರ್ಯಕ್ರಮವನ್ನು ಸತತ ಏಳು ದಿನಗಳ ಕಾಲ ಆನ್‌ಲೈನ್‌ನ ಝೂಮ್ ವೇದಿಕೆಯಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಇಸ್ಕಾನ್ ಸಂಸ್ಥೆಯು ತುಳು ಭಾಷೆಯಲ್ಲಿಯೂ ಭಗವದ್ಗೀತೆ ಪುಸ್ತಕವನ್ನು ಪ್ರಕಟಿಸಬೇಕೆಂದು ಮನವಿ ಮಾಡಲಾಗಿತ್ತು. ತುಳು ಭಾಷಿಗರ ಈ ಅಭಿಮಾನಕ್ಕೆ ಸ್ಪಂದಿಸಿದ್ದ ಇಸ್ಕಾನ್, ತುಳು ಭಗವದ್ಗೀತೆಯನ್ನು ಪ್ರಕಟಿಸುವ ಭರವಸೆ ನೀಡಿತ್ತು. ಇದೀಗ ಸುಮಾರು ಐದು ವರ್ಷಗಳ ಸತತ ಪರಿಶ್ರಮದ ಫಲವಾಗಿ ಕನ್ನಡದ ಭಗವದ್ಗೀತೆಯ ತುಳು ಅನುವಾದ ಸಿದ್ಧಗೊಂಡು ಬಿಡುಗಡೆಯಾಗಿದೆ.

ಬೆಳಿಗ್ಗೆ 11.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆದ ಕಾರ್ಯಕ್ರಮವು ಸಾಂದೀಪನಿ ಸಾಧನಾಶ್ರಮ, ಶ್ರೀ ಕ್ಷೇತ್ರ ಕೇಮಾರು ಇಲ್ಲಿನ ಶ್ರೀ ಶ್ರೀ ಈಶ ವಿಠಲ ದಾಸ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ನಡೆಯಿತು. ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ವಿಶ್ವ ತುಳು ಸಂಘಟಕ ಸರ್ವೋತ್ತಮ ಶೆಟ್ಟಿ, ನಿಟ್ಟೆ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಡಾ. ಸತೀಶ್ಚಂದ್ರಕುಮಾರ್ ಭಂಡಾರಿ ಹಾಗೂ ನಿಟ್ಟೆಯ ಡಾ. ಕೆ. ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದ ಮುಖ್ಯಸ್ಥೆ ಡಾ. ಸಾಯಿಗೀತಾ ಹೆಗ್ಡೆ ಅತಿಥಿಗಳಾಗಿ ಭಾಗವಹಿಸಿದರು.

ತುಳು ಭಗವದ್ಗೀತೆಯ ಕೃತಿ ರಚನೆ ಮತ್ತು ಅನುವಾದ ಕಾರ್ಯದಲ್ಲಿ ವಿಶೇಷ ಆಸಕ್ತಿ ವಹಿಸಿ ಶ್ರಮಿಸಿದ ಮುಂಬೈಯ ಚಂದ್ರಾವತಿ ಪೂಜಾರಿ, ಬೆಂಗಳೂರಿನ ಕೃಷ್ಣದಾಸ ರೈ, ಅಮೆರಿಕದ ಶ್ರೀವಲ್ಲಿ ರೈ ಮಾರ್ಟೆಲ್, ಮಂಗಳೂರಿನ ರೂಪಕಲಾ ಆಳ್ವ, ಯಶೋದಾ ಮೋಹನ್ ಹಾಗೂ ಐಲೇಸಾ ಸಂಸ್ಥೆಯ ಸದಸ್ಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ತುಳು ಭಾಷೆಯಲ್ಲಿ ಭಗವದ್ಗೀತೆಯ ಪ್ರಕಟಣೆಯು ತುಳುವಿನಲ್ಲಿ ಆಧ್ಯಾತ್ಮಿಕ ಸಾಹಿತ್ಯದ ಬೆಳವಣಿಗೆಗೆ ಮಹತ್ವದ ಹೆಜ್ಜೆಯಾಗಿದ್ದು, ಜಗತ್ತಿನಾದ್ಯಂತ ಇರುವ ತುಳು ಭಾಷಿಗರಿಗೆ ಭಗವದ್ಗೀತೆಯ ಸಂದೇಶವನ್ನು ತಮ್ಮ ಮಾತೃಭಾಷೆಯಲ್ಲಿ ತಿಳಿದುಕೊಳ್ಳಲು ಅವಕಾಶ ಕಲ್ಪಿಸಿದೆ. ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.