ತಲವಾರು ಹಿಡಿದು ಅಟ್ಟಹಾಸ: ಬಾರ್ ಬಳಿ ಎರಡು ತಂಡಗಳ ಗಲಾಟೆ!

0
62

ಉಪ್ಪಿನಂಗಡಿ : ಎರಡು ತಂಡಗಳ ನಡುವೆ ತಲವಾರು ಮತ್ತು ಬಿಯರ್ ಬಾಟಲಿ ಹಿಡಿದು ಗಲಾಟೆ ನಡೆದ ಘಟನೆ ಅಕ್ಟೋಬರ್ 18ರ ರಾತ್ರಿ ಉಪ್ಪಿನಂಗಡಿಯ ಬಾರ್‌ವೊಂದರ ಬಳಿ ನಡೆದಿದೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮದ್ಯ ಸೇವಿಸಿದ್ದ ತಂಡದವರು ಬಾರ್‌ನ ಹೊರಗಡೆ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಗಲಾಟೆ ನಡೆಸಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಇಳಂತಿಲದ ಮಂಜುನಾಥ್ ಮತ್ತು ಕರ್ವೇಲಿನ ವಿಶ್ವನಾಥ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರ್ವೇಲಿನ ಮುನ್ನ ಎಂಬಾತ ತಲವಾರು ಝಳಪಿಸಿದ್ದರೆ, ಮತ್ತೊಬ್ಬನ ಕೈಯಲ್ಲಿ ಬಿಯರ್ ಬಾಟಲಿ ಇತ್ತು ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಉಪ್ಪಿನಂಗಡಿ ಪೊಲೀಸರು, ಮಂಜುನಾಥ್‌ನನ್ನು ಹಿಡಿದು ಆತನ ಕೈಯಲ್ಲಿದ್ದ ತಲವಾರನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರನ್ನು ಕಂಡ ಮುನ್ನ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.