ಅ. 26ರೊಳಗೆ ರಾಜಣ್ಣಗೆ ಸಚಿವ ಸ್ಥಾನ ನೀಡಿ ಅನುಪಮಾ ಶೆಣೈ ಆಗ್ರಹ

0
18

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಮತ್ತು ‘ವೋಟ್‌ ಚೋರಿ’ ವಿಚಾರದಲ್ಲಿ ಸತ್ಯ ಮಾತನಾಡಿದ್ದಕ್ಕಾಗಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಮಾಜಿ ಡಿವೈಎಸ್‌ಪಿ ಹಾಗೂ ಸಮಾಜಸೇವಕಿ ಅನುಪಮಾ ಶೆಣೈ ಆರೋಪಿಸಿದರು.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್‌ 26ರ ವಾಲ್ಮೀಕಿ ಜಯಂತಿಯೊಳಗೆ ರಾಜಣ್ಣ ಅವರನ್ನು ಸಚಿವ ಸಂಪುಟಕ್ಕೆ ಮರುನೇಮಕ ಮಾಡಬೇಕು. ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅಕ್ರಮಗಳ ಕುರಿತು ಧ್ವನಿ ಎತ್ತಿದ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಿರುವುದು ಅನ್ಯಾಯ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತೊಡಗಿರುವ ಬೂತ್‌ ಮಟ್ಟದ ಅಧಿಕಾರಿಗಳು ಹಾಗೂ ಚುನಾವಣಾ ನೋಂದಣಾಧಿಕಾರಿಗಳ ಮೇಲೆ ರಾಜಕೀಯ ಒತ್ತಡವಿದೆ. ಈ ಕುರಿತು ಸರ್ಕಾರ ಗಂಭೀರವಾಗಿ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ರಾಜಣ್ಣ ಅವರನ್ನು ಮರುನೇಮಕ ಮಾಡದಿದ್ದರೆ ರಾಜ್ಯದಲ್ಲಿ ಹೋರಾಟ ಆರಂಭಿಸುವುದರ ಜೊತೆಗೆ ಅಗತ್ಯವಿದ್ದರೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ವಾಲ್ಮೀಕಿ ಜಯಂತಿಯನ್ನು ಸರ್ಕಾರದ ವಿರುದ್ಧ ಪ್ರತಿಭಟನೆಯ ದಿನವನ್ನಾಗಿ ಆಚರಿಸಬೇಕು ಎಂದು ಅವರು ಕರೆ ನೀಡಿದರು.