ಉಡುಪಿ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಎಂ–ಸ್ಯಾಂಡ್, ಜಲ್ಲಿ ಸೇರಿದಂತೆ ವಿವಿಧ ಕಟ್ಟಡ ಸಾಮಗ್ರಿಗಳನ್ನು ಹೊರರಾಜ್ಯಗಳಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗಿ, ಬೆಲೆ ಏರಿಕೆಯಾಗುತ್ತಿದೆ. ಜಿಲ್ಲಾಡಳಿತ ಕೂಡಲೇ ಕಠಿಣ ಕ್ರಮ ಕೈಗೊಂಡು ಹೊರರಾಜ್ಯಗಳಿಗೆ ನಡೆಯುತ್ತಿರುವ ಸಾಗಣೆಯನ್ನು ತಡೆಯಬೇಕು. ಇಲ್ಲವಾದಲ್ಲಿ ಲಾರಿ, ಟೆಂಪೋ ಮಾಲಕರು, ಚಾಲಕರು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಮುಷ್ಕರ ನಡೆಸಲಾಗುವುದು ಎಂದು ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಟೆಂಪೋ ಮಾಲಕರ ಸಂಘದ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಎಚ್ಚರಿಕೆ ನೀಡಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮರಳು ದೊರೆಯದಿರುವುದರಿಂದ ಕಟ್ಟಡ ನಿರ್ಮಾಣಕ್ಕೆ ಎಂ–ಸ್ಯಾಂಡ್ ಮತ್ತು ಜಲ್ಲಿಯನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಗಣಿ ಗುತ್ತಿಗೆದಾರರು, ಎಂ–ಸ್ಯಾಂಡ್, ಜಲ್ಲಿ, ಶಿಲೆಕಲ್ಲು, ಕೆಂಪುಕಲ್ಲು ಸೇರಿದಂತೆ ಕಟ್ಟಡ ಸಾಮಗ್ರಿಗಳ ದರವನ್ನು ವರ್ಷದಲ್ಲಿ ನಾಲ್ಕೈದು ಬಾರಿ ಮನಬಂದಂತೆ ಏರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಟ್ಟಡ ಸಾಮಗ್ರಿಗಳನ್ನು ಸಾಗಿಸುವ ಲಾರಿ ಮತ್ತು ಟೆಂಪೋ ಮಾಲಕರು ಹಾಗೂ ಚಾಲಕರಿಗೆ ಕೆಲವರು ಬೆದರಿಕೆ ಹಾಕುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಸಾಗಣೆ ಪರವಾನಗಿ ನೀಡಲು ನಿರಾಕರಿಸುವುದು ಹಾಗೂ ಪರವಾನಗಿ ನೀಡಲು ಹೆಚ್ಚುವರಿ ಹಣ ವಸೂಲಿ ಮಾಡುವ ದೂರುಗಳಿವೆ. ಜಿಪಿಎಸ್ ಇಲ್ಲದ ವಾಹನಗಳಿಗೆ ನಿಯಮಬಾಹಿರವಾಗಿ ಕಟ್ಟಡ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ. ಗಣಿ ಗುತ್ತಿಗೆಗೆ ನಿಗದಿಪಡಿಸಿದ ಪ್ರದೇಶದ ಹೊರತಾಗಿಯೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪಗಳಿದ್ದರೂ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೌನ ವಹಿಸಿದೆ ಎಂದು ದೂರಿದರು.
ಜಿಲ್ಲಾಡಳಿತ ಈ ಕೂಡಲೇ ಮಧ್ಯಪ್ರವೇಶಿಸಿ ಹೊರರಾಜ್ಯಗಳಿಗೆ ನಡೆಯುತ್ತಿರುವ ಎಂ–ಸ್ಯಾಂಡ್, ಜಲ್ಲಿ ಹಾಗೂ ಇತರ ಕಟ್ಟಡ ಸಾಮಗ್ರಿಗಳ ಸಾಗಣೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಅಕ್ರಮ ಸಾಗಣೆ ಮತ್ತು ಗಣಿಗಾರಿಕೆಗೆ ಕಡಿವಾಣ ಹಾಕಿ, ಜಿಲ್ಲೆಯ ಜನರಿಗೆ ಕೈಗೆಟುಕುವ ದರದಲ್ಲಿ ಕಟ್ಟಡ ಸಾಮಗ್ರಿಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಬೇಡಿಕೆ ಈಡೇರದಿದ್ದರೆ ಜಿಲ್ಲೆಯ ಲಾರಿ, ಟೆಂಪೋ ಮಾಲಕರು, ಚಾಲಕರು, ಸಂಬಂಧಪಟ್ಟ ಸಂಘಟನೆಗಳು ಹಾಗೂ ಜನಸಾಮಾನ್ಯರನ್ನು ಒಗ್ಗೂಡಿಸಿ ಬೃಹತ್ ಮುಷ್ಕರ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಹರೀಶ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

