ರೈಲಿನಲ್ಲಿ ಮೊಬೈಲ್ ಬಳಕೆದಾರರೇ ಎಚ್ಚರ: ಇಯರ್‌ಫೋನ್ ಬಳಕೆ ಕಡ್ಡಾಯವೇ?

0
15

ಬೆಂಗಳೂರು : ರೈಲು ಪ್ರಯಾಣದ ವೇಳೆ ಇತರ ಪ್ರಯಾಣಿಕರಿಗೆ ತೊಂದರೆಯಾಗುವಂತೆ ಮೊಬೈಲ್‌ನಲ್ಲಿ ಜೋರಾಗಿ ಹಾಡು ಕೇಳುವುದು, ಸಿನಿಮಾ ಹಾಗೂ ರೀಲ್ಸ್ ವೀಕ್ಷಿಸುವುದು ಮತ್ತು ಗಟ್ಟಿಯಾಗಿ ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ರೈಲಿನಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಇಂತಹ ವರ್ತನೆಗಳ ವಿರುದ್ಧ ರೈಲ್ವೆ ನಿಯಮಗಳಡಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಬಹುದೆಂದು ವರದಿಯಾಗಿದೆ.

ಜನ್ ವಿಶ್ವಾಸ್ ಕಾಯ್ದೆಯಡಿ ರೈಲ್ವೆ ಕಾಯ್ದೆಯ ಸೆಕ್ಷನ್ 145(2)(ಎ) ಪ್ರಕಾರ, ರೈಲಿನಲ್ಲಿ ಇತರರಿಗೆ ಕಿರಿಕಿರಿ ಉಂಟುಮಾಡುವ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರೈಲ್ವೆ ಸಿಬ್ಬಂದಿ ಎಚ್ಚರಿಕೆ ನೀಡಿದ ಬಳಿಕವೂ ನಿಯಮ ಉಲ್ಲಂಘನೆ ಮುಂದುವರಿಸಿದರೆ, ಆರು ತಿಂಗಳವರೆಗೆ ಸರಳ ಜೈಲು ಶಿಕ್ಷೆ ಅಥವಾ ₹5,000ವರೆಗೆ ದಂಡ ಅಥವಾ ಎರಡನ್ನೂ ವಿಧಿಸುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ರೈಲು ಪ್ರಯಾಣದ ವೇಳೆ ಇಯರ್‌ಫೋನ್ ಬಳಸದೆ ಮೊಬೈಲ್‌ನಲ್ಲಿ ಜೋರಾಗಿ ಹಾಡು, ಸಿನಿಮಾ ಹಾಗೂ ಸಾಮಾಜಿಕ ಜಾಲತಾಣಗಳ ರೀಲ್ಸ್ ವೀಕ್ಷಿಸುವುದರಿಂದ ಸಹಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ನಿಯಮ ಪಾಲನೆಯ ಮೇಲ್ವಿಚಾರಣೆ ನಡೆಸುವಂತೆ ಟಿಕೆಟ್ ಪರಿಶೀಲಕರು ಹಾಗೂ ರೈಲ್ವೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ.

ಪ್ರಯಾಣಿಕರು ಮೊಬೈಲ್‌ನಲ್ಲಿ ಹಾಡು ಅಥವಾ ವಿಡಿಯೋಗಳನ್ನು ವೀಕ್ಷಿಸುವಾಗ ಇಯರ್‌ಫೋನ್ ಬಳಸಬೇಕು. ಮೊಬೈಲ್ ಕರೆಗಳ ಸಂದರ್ಭದಲ್ಲಿ ಕಡಿಮೆ ಧ್ವನಿಯಲ್ಲಿ ಮಾತನಾಡಬೇಕು. ಸಹಪ್ರಯಾಣಿಕರ ನೆಮ್ಮದಿ ಮತ್ತು ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ರೈಲ್ವೆ ಇಲಾಖೆ ಮನವಿ ಮಾಡಿದೆ.

ರೈಲು ಪ್ರಯಾಣ ಎಲ್ಲರಿಗೂ ಆರಾಮದಾಯಕವಾಗಿರಲಿ ಎಂಬ ಉದ್ದೇಶದಿಂದ ಪ್ರತಿಯೊಬ್ಬ ಪ್ರಯಾಣಿಕರೂ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ.