ಕರ್ನಾಟಕ ಸಂಘ ಶಾರ್ಜಾದಿಂದ ‘ಮಯೂರ ಸವಿರುಚಿ 2026’: ಬೆಂಕಿರಹಿತ ಅಡುಗೆಯಲ್ಲಿ ಸೃಜನಶೀಲತೆ ಮೆರೆದ ಸ್ಪರ್ಧಿಗಳು

0
9

ಕರ್ನಾಟಕ ಸಂಘ ಶಾರ್ಜಾದ ವತಿಯಿಂದ ನಡೆದ ವಿನೂತನ ವಿಶೇಷ ಕಾರ್ಯಕ್ರಮ

ದುಬೈ : ಬೋಟ್‌ಮ್ಯಾನ್ಸ್ ಹಬ್ ಪ್ರಸ್ತುತಿಯಲ್ಲಿ, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ಪ್ರಾಯೋಜಕತ್ವದಲ್ಲಿ ಕರ್ನಾಟಕ ಸಂಘ ಶಾರ್ಜಾ ಆಯೋಜಿಸಿದ ‘ಮಯೂರ ಸವಿರುಚಿ 2026’ ಬೆಂಕಿರಹಿತ ಅಡುಗೆ ಸ್ಪರ್ಧೆಯು ಅಕ್ಟೋಬರ್ 18ರಂದು ದುಬೈನ ಅಲ್ ಖುಸೈಸ್‌ನ ದುಬೈ ಗ್ರ್ಯಾಂಡ್ ಹೋಟೆಲ್ ಬೈ ಫಾರ್ಚೂನ್‌ನಲ್ಲಿ ಉತ್ಸಾಹಭರಿತವಾಗಿ ನಡೆಯಿತು.18ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ, ಬೆಂಕಿಯ ಬಳಕೆಯಿಲ್ಲದೆ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸುವ ಮೂಲಕ ತಮ್ಮ ಅಡುಗೆ ಕೌಶಲ್ಯ ಹಾಗೂ ಸೃಜನಶೀಲತೆಯನ್ನು ಪ್ರದರ್ಶಿಸಿದರು.

ಮಹಿಳಾ ಸ್ಪರ್ಧಿಗಳು ವಿವಿಧ ಪದಾರ್ಥಗಳನ್ನು ಬಳಸಿ ಸಿದ್ಧಪಡಿಸಿದ ಖಾದ್ಯಗಳು ಹಾಗೂ ಅವುಗಳನ್ನು ಅಲಂಕರಿಸಿ ಪ್ರಸ್ತುತಪಡಿಸಿದ ವಿಧಾನ ಗಮನ ಸೆಳೆಯಿತು. ಮಹಿಳೆಯರ ಪ್ರತಿಭೆಗೆ ವೇದಿಕೆ ಕಲ್ಪಿಸಿದ ಈ ಕಾರ್ಯಕ್ರಮವು ಅಡುಗೆಯಲ್ಲಿನ ಹೊಸತನ ಮತ್ತು ಸೃಜನಾತ್ಮಕ ಚಿಂತನೆಗೆ ಪ್ರೋತ್ಸಾಹ ನೀಡಿತು. ಕಾರ್ಯಕ್ರಮದ ಸೆಲೆಬ್ರಿಟಿ ತೀರ್ಪುಗಾರರಾಗಿ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಪ್ರಾಚಿ ಶೆಟ್ಟಿ ಭಾಗವಹಿಸಿದ್ದರು. ಅವರೊಂದಿಗೆ ನೀಮಾ ಸುರೇಶ್, ಹೇಮಾ ಮಹೇಶ್ ಹಾಗೂ ಸುಂದರ್ ಶೆಟ್ಟಿ ಅಬುಧಾಬಿ ಅವರು ತೀರ್ಪುಗಾರರಾಗಿ ಸಹಕರಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ರೂಪಾಲಿ ಪ್ರವೀಣ್ ಶೆಟ್ಟಿ, ಸಂಘದ ಸಲಹಾ ಮಂಡಳಿಯ ನಿರ್ದೇಶಕರಾದ ಪ್ರವೀಣ್ ಶೆಟ್ಟಿ,ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷ ರಂಗಸಾರಥಿ ವಿಶ್ವನಾಥ ಶೆಟ್ಟಿ ಹಾಗೂ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಹಲವು ಕನ್ನಡ ಬ್ಲಾಗರ್‌ಗಳು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳ ಭಾಗವಹಿಸುವಿಕೆಯೂ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.

ಸಂಘದ ಅಧ್ಯಕ್ಷ ರಂಗಸಾರಥಿ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು.ಆರತಿ ಅಡಿಗ ಕಾರ್ಯಕ್ರಮವನ್ನು ನಿರೂಪಿಸಿದರು.ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕುಂದಾಪುರ ವಂದನಾರ್ಪಣೆ ಸಲ್ಲಿಸಿದರು.

‘ಮಯೂರ ಪಾಕಸಿರಿ 2026’ ಕಿರೀಟ ಯಾರ ಮುಡಿಗೆ?..

ಸ್ಪರ್ಧೆಯ ವಿಜೇತರನ್ನು ನವೆಂಬರ್ 15,2026ರಂದು ನಡೆಯಲಿರುವ ಕರ್ನಾಟಕ ಸಂಘ ಶಾರ್ಜಾದ 24ನೇ ವಾರ್ಷಿಕೋತ್ಸವ,ಕರ್ನಾಟಕ ರಾಜ್ಯೋತ್ಸವ ಹಾಗೂ ಮಯೂರ ಗ್ಲೋಬಲ್ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಘೋಷಿಸಲಾಗುವುದು.ಪ್ರತಿಷ್ಠಿತ ‘ಮಯೂರ ಪಾಕಸಿರಿ 2026’ ಕಿರೀಟ ಯಾರ ಮುಡಿಗೇರಲಿದೆ ಎಂಬ ಕುತೂಹಲಕ್ಕೆ ಅಂದು ತೆರೆ ಬೀಳಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.


ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸ್ವಯಂಸೇವಕರ ಸಹಕಾರದೊಂದಿಗೆ ‘ಮಯೂರ ಸವಿರುಚಿ 2026’ ಯಶಸ್ವಿಯಾಗಿ ನೆರವೇರಿತು.