ನೆಲಪ್ಪಾಲು ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನ, ಕಲಶ ಸಂಗಮ

0
16

ವರದಿ : ಆದರ್ಶ ಉಪ್ಪಿನಂಗಡಿ

​ಪುತ್ತೂರು : ತಾಲೂಕಿನ ಪಡ್ನೂರು ಗ್ರಾಮದ ನೆಲಪ್ಪಾಲಿನ ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ಧರ್ಮಜಾಗೃತಿಯ ಉದ್ದೇಶದಿಂದ ನವೆಂಬರ್ 26, 27, 28 ಮತ್ತು 29ರಂದು ಪಂಚಮುಖಿ ಆಂಜನೇಯ ಹವನ ಹಾಗೂ ಕಲಶ ಸಂಗಮ ಕಾರ್ಯಕ್ರಮಗಳು ನಡೆಯಲಿವೆ.

​ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರ ಶ್ರಮದಾನ ಹಾಗೂ ಸಮಾಜದ ಸಹಕಾರದಿಂದ ರೂಪುಗೊಂಡಿರುವ ಈ ಕ್ಷೇತ್ರವು ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಶಕ್ತಿ ಕೇಂದ್ರವಾಗಿ ಬೆಳೆದಿದೆ.

ಕಾರ್ಯಕ್ರಮದ ಭಾಗವಾಗಿ ತಾಲೂಕಿನ ವಿವಿಧ ಗ್ರಾಮಗಳ ಧಾರ್ಮಿಕ ಕೇಂದ್ರಗಳಿಂದ ಸಂಗ್ರಹಿಸಿದ ಪವಿತ್ರ ತೀರ್ಥದ ಕಲಶಗಳ ಭವ್ಯ ಶೋಭಾಯಾತ್ರೆ ನಡೆದು, ಶ್ರೀ ವೀರಾಂಜನೇಯ ಸ್ವಾಮಿಗೆ ಅಭಿಷೇಕ ನೆರವೇರಲಿದೆ.

​ನಾಲ್ಕು ದಿನಗಳ ಕಾಲ ನಡೆಯುವ ಈ ಧಾರ್ಮಿಕ ಮಹೋತ್ಸವದಲ್ಲಿ ಹವನ, ಯಾಗ, ಭಜನಾ ಸಂಕೀರ್ತನೆ, ಹನುಮಾನ್ ಚಾಲೀಸಾ ಪಠಣ, ರಾಮಾಯಣ ಪ್ರವಚನ, ಧರ್ಮಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಸಮಿತಿಯ ಅಧ್ಯಕ್ಷರಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವ ವಹಿಸಿದ್ದು, ಇತ್ತೀಚೆಗೆ ಶ್ರೀ ಕ್ಷೇತ್ರದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಗಿದೆ.

​ಸಮಾಜದಲ್ಲಿ ಐಕ್ಯತೆ, ಸಂಸ್ಕಾರ ಮತ್ತು ಭಕ್ತಿಭಾವವನ್ನು ಹೆಚ್ಚಿಸುವ ಈ ಪುಣ್ಯಕಾರ್ಯದಲ್ಲಿ ಪಕ್ಷಾತೀತವಾಗಿ ಸರ್ವ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.