ಬೇರೊಬ್ಬನ ಜೊತೆ ಮದುವೆಗೆ ನಿರಾಕರಣೆ : ಸ್ವಂತ ಮಗಳ ಮೇಲೆಯೇ ಗುಂಡು ಹಾರಿಸಿದ ತಂದೆ

0
51

ತಾನು ಪ್ರೀತಿಸಿದ ಯುವಕನನ್ನು ಮದುವೆಯಾಗಲು ಬಯಸಿದ್ದ ಮಗಳ ಮೇಲೆ ತಂದೆಯೇ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ 19 ವರ್ಷದ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಗಾಯಗೊಂಡ ಯುವತಿಯನ್ನು ಶಾಜಿಯಾ (19) ಎಂದು ಗುರುತಿಸಲಾಗಿದೆ. ಆಕೆಯ ತಂದೆ ಆಸಿನ್ ಖಾನ್ (48) ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.

ವರದಿಗಳ ಪ್ರಕಾರ, ಆಸಿನ್ ಖಾನ್ ತನ್ನ ಮಗಳ ಮದುವೆಯನ್ನು ನವೆಂಬರ್ 19ರಂದು ಬೇರೊಬ್ಬ ಯುವಕನೊಂದಿಗೆ ನಿಶ್ಚಯಿಸಿದ್ದನು. ಆದರೆ ಶಾಜಿಯಾ ತಾನು ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಹೇಳಿ, ತಂದೆ ನಿಶ್ಚಯಿಸಿದ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಳು. ಇದರಿಂದ ಕೋಪಗೊಂಡಿದ್ದ ತಂದೆ, ಸೋಮವಾರ ಮಧ್ಯಾಹ್ನ ಮಗಳು ನಿದ್ರಿಸುತ್ತಿದ್ದ ವೇಳೆ ಆಕೆಯ ತಲೆಗೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ಯುವತಿಯ ತಾಯಿ ಖೈರುನ್ನಿಶಾ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗಳನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ತಕ್ಷಣವೇ ಗಾಯಗೊಂಡ ಶಾಜಿಯಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸೈಫೈ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಯುವತಿಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ವರದಿಯಾಗಿದೆ.

ಘಟನೆಯ ಬಳಿಕ ಖೈರುನ್ನಿಶಾ ಅವರು ಪತಿ ಆಸಿನ್ ಖಾನ್ ವಿರುದ್ಧ ಭೋಂಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮಗಳ ವಿವಾಹದ ಆಯ್ಕೆಯ ವಿಚಾರವಾಗಿ ನಡೆದಿರುವ ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಯುವತಿಯ ಪ್ರಾಣ ಉಳಿಯಲಿ ಎಂದು ಹಾರೈಸುತ್ತಿದ್ದಾರೆ.