ಅಕ್ರಮ ಸಂಬಂಧದ ಶಂಕೆ: ಅವಳಿ ಮಕ್ಕಳ ಭೀಕರ ಹತ್ಯೆ

0
60

ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಅವಳಿ ಮಕ್ಕಳನ್ನು ತಾಯಿಯೇ ತನ್ನ ಪ್ರಿಯಕರ ಹಾಗೂ ಹಿರಿಯ ಮಗನ ಸಹಾಯದಿಂದ ಕೊಲೆ ಮಾಡಿಸಿರುವ ಆಘಾತಕಾರಿ ಘಟನೆ ರಾಜಸ್ಥಾನದ ಡೀಗ್ ಜಿಲ್ಲೆಯ ಬದೇಸ್ರಾ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ಮಕ್ಕಳನ್ನು ವಿನಯ್ ಮತ್ತು ವಿಷ್ಣು ಚೌಧರಿ ಎಂದು ಗುರುತಿಸಲಾಗಿದೆ. ಮಂಗಳವಾರ ಮುಂಜಾನೆ ಇಬ್ಬರೂ ಮನೆಯಿಂದ ಹೊರಗೆ ಹೋಗಿದ್ದರು. ಬಹಳ ಹೊತ್ತಾದರೂ ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಮಕ್ಕಳ ತಾಯಿಯ ಸಹೋದರಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆಯ ಸಮೀಪದ ಸ್ಥಳವೊಂದರಲ್ಲಿ ಇಬ್ಬರೂ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮಕ್ಕಳ ಕುತ್ತಿಗೆಯ ಭಾಗದಲ್ಲಿ ಗಂಭೀರ ಗಾಯಗಳಿದ್ದು, ತಲೆಯ ಮೇಲೂ ಗಾಯದ ಗುರುತುಗಳು ಕಂಡುಬಂದಿವೆ ಎಂದು ಡೀಗ್ ಪೊಲೀಸ್ ಅಧೀಕ್ಷಕ ಕಾಂಬಳೆ ಶರಣ್ ಗೋಪಿನಾಥ್ ತಿಳಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಪ್ರೀತಿ ಎಂಬ ಮಹಿಳೆ ವ್ಯಕ್ತಿಯೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇದಕ್ಕೆ ಅವಳಿ ಮಕ್ಕಳು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೆ, ಆಕೆಯ 16 ವರ್ಷದ ಹಿರಿಯ ಮಗ ತಾಯಿಯ ಸಂಬಂಧಕ್ಕೆ ಬೆಂಬಲ ನೀಡಿದ್ದ ಎನ್ನಲಾಗಿದೆ.

ಮಹಿಳೆ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದು, ಆಕೆಯ ಸೂಚನೆಯ ಮೇರೆಗೆ ಪ್ರಿಯಕರ ಮತ್ತು ಹಿರಿಯ ಮಗ ಸೇರಿ ಅವಳಿ ಮಕ್ಕಳನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ, ಆಕೆಯ ಪ್ರಿಯಕರ ಹಾಗೂ 16 ವರ್ಷದ ಹಿರಿಯ ಮಗನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.