ಸಾಂತ್ವನ ಹೇಳುವ ನೆಪದಲ್ಲಿ ಬಂದು ಚಿನ್ನದ ಸರ ಕದ್ದ ಚೋರನ ಬಂಧನ

0
62


​ಉಡುಪಿ: ಮಗ ತೀರಿಹೋದ ದುಃಖದಲ್ಲಿದ್ದ ವೃದ್ಧೆಗೆ ಭಾವನಾತ್ಮಕವಾಗಿ ಮಾತನಾಡಿ, ಇನ್ಶೂರೆನ್ಸ್ ಹಣ ಕೊಡಿಸುವುದಾಗಿ ನಂಬಿಸಿ ಕುತ್ತಿಗೆಯಲ್ಲಿದ್ದ ಬಂಗಾರದ ಸರ ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ.

​ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ಸುಬ್ರಮಣ್ಯ ನಗರದ ನಿವಾಸಿ, ಹೋಮ್ ನರ್ಸ್ ಕೆಲಸ ಮಾಡುತ್ತಿದ್ದ ಉಮೇಶ್ ಶೆಟ್ಟಿ (45) ಬಂಧಿತ ಆರೋಪಿ. ಈತನಿಂದ ₹1,85,000 ಮೌಲ್ಯದ 15 ಗ್ರಾಂ (ಸುಮಾರು 2 ಪವನ್) ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ ಅನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

​ಕುಕ್ಕೆಹಳ್ಳಿ ಗ್ರಾಮದ ಬಡಪಾಲು ನಿವಾಸಿ ಬಾಬಿ ಹಾಂಡ್ತಿ (75) ಎಂಬ ವೃದ್ಧೆ ಮನೆಯಲ್ಲಿದ್ದಾಗ ಸೆಪ್ಟೆಂಬರ್ 13ರಂದು ಬೆಳಿಗ್ಗೆ ಬಂದ ಆರೋಪಿ ಉಮೇಶ್ ಶೆಟ್ಟಿ, “ನಿಮ್ಮ ಮಗ ದಿನೇಶ್ ತೀರಿಹೋದ ವಿಚಾರ ತಿಳಿಯಿತು. ನಾಳೆ ಇನ್ಶೂರೆನ್ಸ್ ಅಧಿಕಾರಿಗಳು ಬರುತ್ತಾರೆ, ನಿಮಗೆ ಹೆಚ್ಚಿನ ಪರಿಹಾರ ಹಣ ಸಿಗುವಂತೆ ಮಾಡುತ್ತೇನೆ” ಎಂದು ನಂಬಿಸಿ ಹೋಗಿದ್ದ.
​ಅದೇ ದಿನ ಮಧ್ಯಾಹ್ನ ವೃದ್ಧೆ ಬಾಬಿ ಹಾಂಡ್ತಿ ತಮ್ಮ ಕುತ್ತಿಗೆಯಲ್ಲಿದ್ದ 2 ಪವನ್ ಚಿನ್ನದ ಸರವನ್ನು ತೆಗೆದು ಮನೆಯೊಳಗಿನ ಟೇಬಲ್ ಮೇಲಿಟ್ಟಿದ್ದರು. ಮಧ್ಯಾಹ್ನ 1:30ರ ಸುಮಾರಿಗೆ ಮತ್ತೆ ಬಂದ ಆರೋಪಿ, ವೃದ್ಧೆಯ ಬಳಿ ಭಾವನಾತ್ಮಕವಾಗಿ ಮಾತನಾಡಿ ಸಾಂತ್ವನ ಹೇಳಿದ್ದ. ಈ ವೇಳೆ ವೃದ್ಧೆ ಆತನನ್ನು ಜಗುಲಿಯಲ್ಲಿ ಕುಳಿತುಕೊಳ್ಳಲು ಹೇಳಿ, ತೋಟಕ್ಕೆ ಹೋಗಿ ದನವನ್ನು ಕೊಟ್ಟಿಗೆಗೆ ತಂದು ಕಟ್ಟಲು ತೆರಳಿದ್ದರು. ಈ ಸಮಯವನ್ನು ಬಳಸಿಕೊಂಡ ಆರೋಪಿ, ಟೇಬಲ್ ಮೇಲಿದ್ದ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದ. ಈ ಕುರಿತು ವೃದ್ಧೆಯ ಮತ್ತೊಬ್ಬ ಮಗ ಶಂಕರ ಕುಲಾಲ್ ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

​50ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ:
​ಪ್ರಕರಣದ ತನಿಖೆ ಕೈಗೆತ್ತಿಕೊಂಡ ಹಿರಿಯಡ್ಕ ಪೊಲೀಸರು ಸುಮಾರು 50ರಿಂದ 60 ಸಿಸಿಟಿವಿ ಕ್ಯಾಮೆರಾಗಳ ಫೂಟೇಜ್‌ಗಳನ್ನು ಕೂಲಂಕುಷವಾಗಿ ವೀಕ್ಷಿಸಿ, ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಅಕ್ಟೋಬರ್ 23ರಂದು ಉಡುಪಿಯ ಸುಬ್ರಮಣ್ಯ ನಗರದಲ್ಲಿದ್ದ ಆರೋಪಿಯ ಮನೆಯ ಬಳಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.