ಸರಕಾರದ ಯೋಜನೆಗಳು ನ್ಯಾಯಯುತವಾಗಿ ಸಮುದಾಯದ ಕೈ ಸೇರಿದಾಗ ಜಯಂತಿ ಆಚರಣೆ ಅರ್ಥಪೂರ್ಣ

0
4

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಯಶ್ ಪಾಲ್ ಸುವರ್ಣ ಅಭಿಮತ

ಉಡುಪಿ: ಜಗತ್ತು ಕಂಡ ಸರ್ವಶ್ರೇಷ್ಠ ಪುರುಷ ಶ್ರೀರಾಮ. ಶ್ರೀ ರಾಮನ ಆದರ್ಶಗಳನ್ನು ನಮಗೆ ತಿಳಿಸಿ ಕೊಟ್ಟವರು ಮಹರ್ಷಿ ವಾಲ್ಮೀಕಿ. ಸಮಾಜದಲ್ಲಿ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಉತ್ಕೃಷ್ಟ ಆಡಳಿತ ನೀಡಿದ ಶ್ರೀರಾಮನ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿಯವರ ಹೆಸರಿನಲ್ಲಿ ನೀಡಲಾಗುವ ಸರಕಾರದ ಯೋಜನೆಗಳು ನ್ಯಾಯಯುತವಾಗಿ ಸಮುದಾಯದ ಕೈ ಸೇರಿದಾಗ ಜಯಂತಿ ಆಚರಣೆಗಳು ಅರ್ಥಪೂರ್ಣವಾಗುತ್ತದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಅಭಿಪ್ರಾಯಪಟ್ಟರು.

ಅವರು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ನಗರಸಭೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್ ನ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರಕಾರವು ಪ.ಜಾತಿ ಹಾಗೂ ಪ.ಪಂಗಡದ ಸಮುದಾಯದವರಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ಕೆಲಸಗಳನ್ನು ಇಲಾಖೆಗಳು ಕೈಗೊಳ್ಳಬೇಕು. ಆಚರಣೆಗಳು ಕೇವಲ ಮಾಲಾರ್ಪಣೆಗೆ ಸೀಮಿತವಾಗದೆ ಯೋಜನೆಗಳ ಲಾಭ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಕೊರಗ ಸಮುದಾಯವು ಕಳೆದ ಕೆಲವು ತಿಂಗಳುಗಳಿಂದ ವಿಮೆ, ಆಹಾರದ ಕಿಟ್, ಹಾಗೂ ವಿದ್ಯಾರ್ಥಿವೇತನ ದೊರಕದೆ ಸಮಸ್ಯೆ ಎದುರಿಸುತ್ತಿದೆ. ಈ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು. ಪ.ಜಾತಿ ಹಾಗೂ ಪ.ಪಂಗಡದ ಸಮುದಾಯಗಳಿಗೆ ನೀಡಲಾಗುತ್ತಿರುವ ಅನುದಾನಗಳು ಕ್ಲಪ್ತ ಸಮಯಕ್ಕೆ ಅವರಿಗೆ ತಲುಪಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದ ಅವರು ಮುಂದಿನ ದಿನಗಳಲ್ಲಿ ಸಮುದಾಯಗಳಿರುವಲ್ಲಿಗೆ ತೆರಳಿ ಅವರ ಜೊತೆಗೆ ಕಾರ್ಯಕ್ರಮಗಳನ್ನು ಆಚರಿಸಲು ಪ್ರಯತ್ನಿಸಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಮಹರ್ಷಿ ವಾಲ್ಮೀಕಿಗಳ ಜೀವನವು ನಮಗೆ ಬದುಕಿನ ಬದಲಾವಣೆಯ ಘಟ್ಟಗಳನ್ನು ತಿಳಿಸುತ್ತದೆ. ಮೊದಲನೆಯದು ನಮ್ಮ ಕರ್ಮಗಳಿಗೆ ನಾವೇ ಜವಾಬ್ದಾರರು ನಮ್ಮ ಕರ್ಮಗಳನ್ನು ಯಾರೂ ನಮ್ಮೊಂದಿಗೆ ಹಂಚಿಕೊಳ್ಳುವುದಿಲ್ಲ. ನಾವು ಮಾಡುವ ಸತ್ಕರ್ಮಗಳು ಬದುಕಿದ್ದಾಗಲೂ ನಾವು ಈ ಜಗತ್ತನ್ನು ಬಿಟ್ಟು ಹೋದಾಗಲೂ ನಮ್ಮ ಜೊತೆ ಬರುತ್ತದೆ. ಎರಡನೆಯದಾಗಿ ಒಂದು ಕ್ಷಣದ ಒಂದು ಆಲೋಚನೆ ಹೇಗೆ ನಮ್ಮ ಬದುಕನ್ನು ಬದಲಾಯಿಸಬಹುದು ಎನ್ನುವುದನ್ನು ತೋರಿಸಿಕೊಡುತ್ತದೆ. ನಮ್ಮ ಜೀವನದಲ್ಲಿ ನಾವು ಒಂದು ಕ್ಷಣದಲ್ಲಿ ತೆಗೆದುಕೊಂಡ ಒಳ್ಳೆಯ ಅಥವಾ ಕೆಟ್ಟ ನಿರ್ಧಾರಗಳು ನಮ್ಮ ಬದುಕನ್ನೇ ಬದಲಾಯಿಸಬಲ್ಲವು ಎನ್ನುವ ದೃಷ್ಟಾಂತವನ್ನು ವಾಲ್ಮೀಕಿಗಳ ಜೀವನ ನಮಗೆ ತೋರಿಸಿಕೊಡುತ್ತದೆ. ಪ್ರಯತ್ನಪೂರ್ವಕವಾಗಿ ನಾವು ಸದಾ ಇತರರಿಗೆ ಒಳ್ಳೆಯದನ್ನೇ ಮಾಡಬೇಕು ಎಂದರು.

ಶ್ರೀನಾರಾಯಣಗುರು ಅಭಿವೃದ್ದಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಆಗಿನ ಜನಜೀವನವನ್ನು ನಮಗೆ ತಿಳಿಸಿಕೊಟ್ಟವರು ಆದಿಕವಿ ಮಹರ್ಷಿ ವಾಲ್ಮೀಕಿ. ಮಹನೀಯರು ರಾಮಾಯಣ, ಮಹಾಭಾರತ ಮಾಹಾಕಾವ್ಯಗಳ ಮೂಲಕ ಮನುಷ್ಯನೊಳಗಿರುವ ವಿಕೃತಿಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಮ್ಮೊಳಗಿನ ವಿಕೃತಿಗಳು ಮರೆಯಾಗಿ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ವಾಲ್ಮೀಕಿ, ಶ್ರೀರಾಮ, ಸೀತೆ, ಭರತನಂತಹ ಮಹಾಪುರುಷರ ಜೀವನ ನಮಗೆ ಮಾದರಿಯಾಗಬೇಕು. ಬೇಡನ ಬಾಣಕ್ಕೆ ಬಲಿಯಾದ ಕ್ರೌಂಚ ಪಕ್ಷಿಗಳ ಅಗಲುವಿಕೆಯ ನೋವಿನಿಂದ ಹುಟ್ಟಿದ ಶ್ಲೋಕವೊಂದು ಮುಂದೆ ನಾರದರ ಮಾರ್ಗದರ್ಶನದಿಂದ ರಾಮಾಯಣ ಮಹಾಕಾವ್ಯವಾಗಿ ರೂಪುತಳೆಯಿತು. ವಾಲ್ಮೀಕಿಯವರ ಅಂತರಂಗದೊಳಗಿನ ದಯೆ-ಕರುಣೆ ರಾಮಾಯಣ ಮಾಹಾಕಾವ್ಯ ರಚಿಸಲು ಸ್ಪೂರ್ತಿಯಾಯಿತು. ಹಲವಾರು ಕವಿಗಳು ರಾಮಾಯಣವನ್ನು ಮರುರಚಿಸಿದ್ದಾರೆ ಆದರೆ ವಾಲ್ಮೀಕಿಯವರು ರಚಿಸಿದ ರಾಮಾಯಣ ಅದ್ವಿತೀಯವಾಗಿದ್ದು ಅದಕ್ಕೆ ಸಾಟಿ ಇಲ್ಲ ಎಂದರು.

ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಉಪ ಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ ಮಹರ್ಷಿ ವಾಲ್ಮೀಕಿ ಅವರ ಜೀವನ ಮತ್ತು ವ್ಯಕ್ತಿತ್ವದ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಹತ್ತನೇ ತರಗತಿಯಲ್ಲಿ 619 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಚೇರ್ಕಾಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಮಂಜುನಾಥ್ ಇವರಿಗೆ 1 ಲಕ್ಷ ರೂ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಪದವಿಪೂರ್ವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮನೀಷಾ, ಅಶ್ವಿತಾ, ಶ್ರಾವ್ಯ, ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸ್ವಸ್ತಿ, ಲಾವಣ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನೋಣಯ್ಯ ರೆಂಜಾಳ, ಡಾ.ಅಶ್ವಿತಾ ಹಾಗೂ ಮಹಾಬಲ ನಾಯ್ಕ್ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಪರಿಶಿಷ್ಟ ವರ್ಗಗಳ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಸಮನ್ವಯಾಧಿಕಾರಿ ನಾರಾಯಣಸ್ವಾಮಿ ಸ್ವಾಗತಿಸಿ, ಐಟಿಡಿಪಿ ಸಿಬ್ಬಂದಿ ಶ್ರೀದೇವಿ ನಿರೂಪಿಸಿ ವಂದಿಸಿದರು.