ಬಾರ್ಕೂರು : ಬಾರ್ಕೂರು ಬಿಲ್ಲವ ಸೇವಾ ಸಂಘದಲ್ಲಿ ಆಡಳಿತ ಮಂಡಳಿ ರಚನೆ ಹಾಗೂ ಗ್ರಂಥಾಲಯ ಕಟ್ಟಡ ನಿರ್ಮಾಣದ ವಿಚಾರವಾಗಿ ವಿವಾದ ಉಂಟಾಗಿದ್ದು, ಹಿಂದಿನ ಆಡಳಿತ ಮಂಡಳಿಯ ಸದಸ್ಯರು ನಕಲಿ ಸಹಿಗಳನ್ನು ಬಳಸಿ ಹೊಸ ಆಡಳಿತ ಮಂಡಳಿ ರಚಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
2026ರ ಆಗಸ್ಟ್ 9ರಂದು ಬಾರ್ಕೂರು ಬಿಲ್ಲವ ಸೇವಾ ಸಂಘದ ಸರ್ವಸದಸ್ಯರ ಮಹಾಸಭೆ ನಡೆದಿತ್ತು. ಸಭೆಯಲ್ಲಿ ಬಾಬು ಶಿವ ಪೂಜಾರಿ ಅವರು ಸಂಘಕ್ಕೆ ಉಚಿತವಾಗಿ ಗ್ರಂಥಾಲಯ ಕಟ್ಟಡ ನಿರ್ಮಿಸಿಕೊಡುವ ಪ್ರಸ್ತಾಪವನ್ನು ಅನುಮೋದನೆಗಾಗಿ ಮಂಡಿಸಿದ್ದರು. ಆದರೆ ಸಂಘದ ಮಂದಿರದ ಮುಂಭಾಗದಲ್ಲಿ ಸುಮಾರು 2,400 ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಿಸುವುದರಿಂದ ಸಭೆ, ಸಮಾರಂಭಗಳಿಗೆ ತೊಂದರೆಯಾಗುವುದರ ಜೊತೆಗೆ ವಾಹನಗಳ ಪಾರ್ಕಿಂಗ್ ಸಮಸ್ಯೆಯೂ ಉಂಟಾಗಬಹುದು ಎಂಬ ಆಕ್ಷೇಪ ವ್ಯಕ್ತವಾಗಿತ್ತು.
ಅಲ್ಲದೆ, ಕಟ್ಟಡ ನಿರ್ಮಾಣದ ನಂತರ ವಿಧಿಸಲಾಗುವ ಷರತ್ತುಗಳು ಹಾಗೂ ಇತರ ವಿಚಾರಗಳ ಬಗ್ಗೆ ಸ್ಪಷ್ಟನೆ ಕೇಳಲಾಗಿತ್ತು. ಈ ಬಗ್ಗೆ ಬಾಬು ಶಿವ ಪೂಜಾರಿ ಅವರು ಸಭೆ ಕರೆದು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿದ ಬಳಿಕ ಮುಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ತೀರ್ಮಾನಿಸಲಾಗಿತ್ತು. ಹೀಗಾಗಿ ಗ್ರಂಥಾಲಯ ಕಟ್ಟಡ ನಿರ್ಮಾಣದ ಪ್ರಸ್ತಾಪಕ್ಕೆ ಸಭೆಯಲ್ಲಿ ಯಾವುದೇ ಅಂತಿಮ ಅನುಮೋದನೆ ದೊರೆತಿರಲಿಲ್ಲ ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.
ಇದೇ ಸಭೆಯಲ್ಲಿ ಮುಂದಿನ ಆಡಳಿತ ಮಂಡಳಿಯ ರಚನೆ ಹಾಗೂ ಅಧ್ಯಕ್ಷರ ಆಯ್ಕೆ ವಿಚಾರವಾಗಿಯೂ ಚರ್ಚೆ ನಡೆದಿತ್ತು. ಅಧ್ಯಕ್ಷ ಸ್ಥಾನಕ್ಕೆ ಹಲವು ಆಕಾಂಕ್ಷಿಗಳು ಇದ್ದುದರಿಂದ ಗದ್ದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸರ್ವೋತ್ತಮ ಪೂಜಾರಿ ಹಾಗೂ ಗಣೇಶ್ ಪೂಜಾರಿ ಅವರು ಚುನಾವಣೆಯ ಮೂಲಕ ಆಡಳಿತ ಮಂಡಳಿ ಆಯ್ಕೆ ಮಾಡುವುದಾಗಿ ತಿಳಿಸಿ ಸಭೆಯಿಂದ ನಿರ್ಗಮಿಸಿದ್ದರು ಎನ್ನಲಾಗಿದೆ.
ನಂತರ ಸಂಘದ ಅಭಿವೃದ್ಧಿಯ ದೃಷ್ಟಿಯಿಂದ ಕೆಲ ಸದಸ್ಯರು ಸಂಘದ ಅಜೀವ ಗೌರವಾಧ್ಯಕ್ಷ ಬಾಬು ಶಿವ ಪೂಜಾರಿ ಅವರನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಹಿಂದಿನ ಆಡಳಿತ ಮಂಡಳಿಯನ್ನೇ ಮುಂದಿನ ಎರಡು ವರ್ಷಗಳ ಅವಧಿಗೆ ಮುಂದುವರಿಸುವ ನಿಟ್ಟಿನಲ್ಲಿ ವಕೀಲರನ್ನು ಸಂಪರ್ಕಿಸಿರುವುದಾಗಿ ಅವರು ತಿಳಿಸಿದ್ದರು ಎಂದು ಸದಸ್ಯರು ಆರೋಪಿಸಿದ್ದಾರೆ.
ಇದಾದ ಬಳಿಕ ಹಿಂದಿನ ಆಡಳಿತ ಮಂಡಳಿಯ ಸದಸ್ಯರೇ ಮುಂದಿನ ಎರಡು ವರ್ಷಗಳ ಅವಧಿಗೆ ಸುಮಾರು 64 ಸದಸ್ಯರ ಆಡಳಿತ ಮಂಡಳಿಯನ್ನು ರಚಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲು ಮಾಹಿತಿ ಹಕ್ಕು ಕಾರ್ಯಕರ್ತ ಶಂಕರ್ ಶಾಂತಿ ಅವರು ಸಹಕಾರ ಇಲಾಖೆಯಿಂದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.
ದಾಖಲೆಗಳ ಪರಿಶೀಲನೆಯ ವೇಳೆ 64 ಸದಸ್ಯರ ಪೈಕಿ ಸುಮಾರು 57ರಿಂದ 58 ಮಂದಿಯ ಸಹಿಗಳನ್ನು ನಕಲು ಮಾಡಿ, ಅವರ ಭಾವಚಿತ್ರಗಳನ್ನು ದಾಖಲೆಯಲ್ಲಿ ಸೇರಿಸುವ ಮೂಲಕ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಆಡಳಿತ ಮಂಡಳಿ ರಚಿಸಲಾಗಿದೆ ಎಂಬ ಆರೋಪವನ್ನು ಅವರು ಮುಂದಿಟ್ಟಿದ್ದಾರೆ.
ಈ ನಡುವೆ ಸಂಘಗಳ ನೋಂದಣಾಧಿಕಾರಿಗಳ ಕಚೇರಿ, ಉಡುಪಿ ಜಿಲ್ಲೆ, ಮಣಿಪಾಲದಿಂದ 2026ರ ಸೆಪ್ಟೆಂಬರ್ 18ರಂದು ನೀಡಲಾದ ಸ್ವೀಕೃತಿ ಪತ್ರದಲ್ಲಿ ಬಾರ್ಕೂರು ಬಿಲ್ಲವ ಸೇವಾ ಸಂಘದ ವತಿಯಿಂದ 2025ರ ಏಪ್ರಿಲ್ನಿಂದ 2026ರ ಮಾರ್ಚ್ವರೆಗಿನ ಲೆಕ್ಕಪತ್ರಗಳು ಹಾಗೂ 2026-27ನೇ ಸಾಲಿನ ಕಾರ್ಯಕಾರಿ ಸಮಿತಿಯ ಪಟ್ಟಿಯನ್ನು ಸೆಪ್ಟೆಂಬರ್ 3ರ ಪತ್ರದೊಂದಿಗೆ ಸಲ್ಲಿಸಲಾಗಿದ್ದು, ದಾಖಲೆಗಳನ್ನು ದಾಖಲಿಸಿರುವುದಾಗಿ ಉಲ್ಲೇಖಿಸಲಾಗಿದೆ.
ಆದರೆ ಈ ಸ್ವೀಕೃತಿ ಪತ್ರವು ಕೆಲವು ಷರತ್ತುಗಳಿಗೆ ಒಳಪಟ್ಟಿದ್ದು, ಸಲ್ಲಿಸಿದ ದಾಖಲೆಗಳಲ್ಲಿ ಲೋಪದೋಷಗಳು, ತಪ್ಪು ಮಾಹಿತಿ ಅಥವಾ ಹಣಕಾಸಿನ ಅವ್ಯವಹಾರಗಳು ಕಂಡುಬಂದಲ್ಲಿ ಸ್ವೀಕೃತಿಯನ್ನು ರದ್ದುಗೊಳಿಸುವ ಅವಕಾಶವನ್ನೂ ನಮೂದಿಸಲಾಗಿದೆ.
ಒಟ್ಟಿನಲ್ಲಿ ಬಾರ್ಕೂರು ಬಿಲ್ಲವ ಸೇವಾ ಸಂಘದ ಆಡಳಿತ ಮಂಡಳಿ ರಚನೆ, ಸದಸ್ಯರ ಸಹಿಗಳ ಸಿಂಧುತ್ವ ಹಾಗೂ ಗ್ರಂಥಾಲಯ ಕಟ್ಟಡ ನಿರ್ಮಾಣದ ವಿಚಾರಗಳು ಇದೀಗ ವಿವಾದದ ಕೇಂದ್ರವಾಗಿವೆ. ಈ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಸ್ಪಷ್ಟನೆ ನೀಡಬೇಕೆಂದು ಸಂಘದ ಸದಸ್ಯರು ಆಗ್ರಹಿಸಿದ್ದಾರೆ.

