ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಪ್ರಕ್ಷುಬ್ಧ ಹಾಗೂ ಅರಾಜಕತೆಯ ವಾತಾವರಣ ನಿಮಾರ್ಣ ಮಾಡಲು ಪ್ರಯತ್ನಿಸುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇಶಾದ್ಯಂತ ‘ಪ್ರಜಾಪ್ರಭುತ್ವವನ್ನು ಉಳಿಸಿ, ಅರಾಜಕತೆಯನ್ನು ಅಳಿಸಿ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಬಿಜೆಪಿ ದ.ಕ. ಮತ್ತು ಉಡುಪಿ ಜಿಲ್ಲೆ ವತಿಯಿಂದ ನ.6ರಂದು ಮಂಗಳೂರಿನಲ್ಲಿ ‘ಬೃಹತ್ ಜನಜಾಗೃತಿ ಪಾದಯಾತ್ರೆ’ ನಡೆಯಲಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ವಕ್ತಾರ ಕೆ.ಎಸ್. ನವೀನ್ ಹೇಳಿದರು.
ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸುಳ್ಳನ್ನು ನೂರು ಬಾರಿ ಹೇಳಿ ಅದನ್ನು ಸತ್ಯ ಮಾಡಲು ಪ್ರಯತ್ನಿಸುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಇವಿಎಂ, ಎಸ್ಐಆರ್ ಮತ್ತು ವೋಟ್ ಚೋರಿ ವಿಚಾರಗಳ ಬಗ್ಗೆ ಸುಳ್ಳು ಅಪಪ್ರಚಾರಗಳನ್ನು ನಡೆಸುತ್ತಿದೆ. ಎಸ್ಐಆರ್ ಪ್ರಕ್ರಿಯೆ ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ನಡೆದಿದೆ. ಎಸ್ಐಆರ್ ಪ್ರಾರಂಭಿಸಿದವರು ನೆಹರೂ, ಇವಿಎಂ ಪರಿಚಯಿಸಿದವರು ರಾಜೀವ್ ಗಾಂಧಿ, ವೋಟ್ ಚೋರಿಯಲ್ಲಿ ಶಿಕ್ಷೆಗೆ ಒಳಗಾದವರು ಇಂದಿರಾಗಾಂಧಿ. ಆದರೆ ರಾಹುಲ್ ವಿನಾಕಾರಣ ಬಿಜೆಪಿ ಸರ್ಕಾರ ಮೇಲೆ ಆರೋಪ ಮಾಡುತ್ತಿದ್ದಾರೆ. ದೇಶ ಒಡೆಯುವ ಸಂಘಟನೆ ಜೊತೆ ಸೇರಿ ಇತಿಹಾಸದಲ್ಲಿ ಮೊದಲ ಬಾರಿಗೆ ಉಚ್ಛ ನ್ಯಾಯಾಲಯಕ್ಕೆ ಮುತ್ತಿಗೆ ಹಾಕುವ ಕೆಲಸ ಹಾಗೂ ಚುನಾವಣಾ ಆಯೋಗದ ಪ್ರತಿಷ್ಠೆಗೆ ಧಕ್ಕೆ ತರುವ ಕೆಲಸ ಕಾಂಗ್ರೆಸ್ ನಿಂದ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
8 ಪ್ರಮುಖ ಕಾರ್ಯಕ್ರಮಗಳು:
‘ಪ್ರಜಾಪ್ರಭುತ್ವವನ್ನು ಉಳಿಸಿ, ಅರಾಜಕತೆಯನ್ನು ಅಳಿಸಿ’ ಅಭಿಯಾನದಡಿ ದೇಶಾದ್ಯಂತ ನವೆಂಬರ್ 30ರ ವರೆಗೆ ಒಂದು ತಿಂಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಸಾರ್ವಜನಿಕರನ್ನೊಳಗೊಂಡು, ಸಮಾಜದ ವಿವಿಧ ಸ್ತರಗಳ 10,000ಕ್ಕೂ ಹೆಚ್ಚು ಜನರ ಪಾಲ್ಗೊಳ್ಳುವಿಕೆಯಲ್ಲಿ ಬೃಹತ್ ಪಾದಯಾತ್ರೆಗಳನ್ನು ಆಯೋಜಿಸಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳು, ಯುವಕರ ಜೊತೆ ಸಂವಾದ ಕಾರ್ಯಕ್ರಮಗಳನ್ನು ನಡೆಸಿ, ದೇಶದ ಇಂದಿನ ಪರಿಸ್ಥಿತಿಯ ಬಗ್ಗೆ ಅರಿವು ಮೂಡಿಸಲಾಗುತ್ತದೆ. ವಕೀಲರು, ಸಮಾಜ ಸೇವಕರು ಮುಂತಾದ ವಿವಿಧ ಪ್ರಬುದ್ಧರನ್ನೊಳಗೊಂಡ ವಿಶೇಷ ಸಭೆ ಮತ್ತು ಗೋಷ್ಠಿಗಳು ನಡೆಯಲಿವೆ. ವಿಶೇಷ ವರದಿಗಳು, ಲೇಖನಗಳನ್ನು ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳ ಮೂಲಕ ಪ್ರಕಟಿಸಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಕೆ.ಎಸ್. ನವೀನ್ ಮಾಹಿತಿ ನೀಡಿದರು.
ನ.6ರಂದು ಮಧ್ಯಾಹ್ನ 3.00 ಗಂಟೆಗೆ ಮಂಗಳೂರಿನಲ್ಲಿ ‘ಬೃಹತ್ ಪಾದಯಾತ್ರೆ’ :
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ ‘ಪ್ರಜಾಪ್ರಭುತ್ವವನ್ನು ಉಳಿಸಿ, ಅರಾಜಕತೆಯನ್ನು ಅಳಿಸಿ’ ಅಭಿಯಾನದ ಅಂಗವಾಗಿ ನ.6ರಂದು ಮಧ್ಯಾಹ್ನ 3.00 ಗಂಟೆಗೆ ಮಂಗಳೂರಿನ ಕ್ಲಾಕ್ ಟವರ್ ಬಳಿ ಮಿನಿ ವಿಧಾನ ಸೌಧದಿಂದ ಕದ್ರಿ ಮೈದಾನದ ವರೆಗೆ ನಡೆಯುವ ‘ಬೃಹತ್ ಜನ ಜಾಗೃತಿ ಪಾದಯಾತ್ರೆ’ಯಲ್ಲಿ ಉಡುಪಿ ಜಿಲ್ಲೆಯಿಂದ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು, ಹಿತೈಷಿಗಳು ಮತ್ತು ಸಾರ್ವಜನಿಕ ಬಂಧುಗಳು ಪ್ರತೀ ವಿಧಾನ ಸಭಾ ಕ್ಷೇತ್ರವಾರು ತಲಾ 1,000ದಂತೆ ಸುಮಾರು 5,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಎ. ಸುವರ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರೇಶ್ಮಾ ಉದಯ ಶೆಟ್ಟಿ, ಶ್ರೀಕಾಂತ್ ನಾಯಕ್, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ವಿಜಯ ಕೊಡವೂರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಶಶಾಂಕ್ ಶಿವತ್ತಾಯ ಸ್ವಾಗತಿಸಿ, ಜಿಲ್ಲಾ ವಕ್ತಾರ ದಿವಾಕರ ಶೆಟ್ಟಿ ಕಲ್ಯಾ ವಂದಿಸಿದರು.

