ಇಂದಿರಾ ಗಾಂಧಿ ಬ್ಯಾಂಕ್ ರಾಷ್ಟ್ರೀಕರಣದ ಮೂಲಕ ಬಡವರು, ರೈತರ ಸಬಲೀಕರಣಕ್ಕೆ ಮುನ್ನುಡಿ ಬರೆದರು: ಆರ್. ಪ್ರಸನ್ನ ಕುಮಾರ್

0
15

-ಮಂದಾರ ರಾಜೇಶ್

​ಶಿವಮೊಗ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಭಾರತದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್ ಅವರು ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ಐತಿಹಾಸಿಕ ಕೊಡುಗೆಗಳನ್ನು ಸ್ಮರಿಸಿದರು.

​ಈ ಸಂದರ್ಭದಲ್ಲಿ ಮಾತನಾಡಿದ ಪ್ರಸನ್ನ ಕುಮಾರ್, ಪ್ರಮುಖ ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ ಇಂದಿರಾ ಗಾಂಧಿಯವರ ನಿರ್ಧಾರವು ದೇಶದ ಆರ್ಥಿಕ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಬ್ಯಾಂಕಿಂಗ್ ಸೌಲಭ್ಯಗಳು ಬಡವರು, ರೈತರು, ಸಣ್ಣ ವ್ಯಾಪಾರಿಗಳು ಹಾಗೂ ಗ್ರಾಮೀಣ ಜನರಿಗೂ ತಲುಪುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.

‘ಗರೀಬಿ ಹಠಾವೋ’ ಘೋಷಣೆ, ಭೂಸುಧಾರಣೆ, ಹಸಿರು ಕ್ರಾಂತಿ, ಬಾಂಗ್ಲಾದೇಶ ವಿಮೋಚನೆ ಮತ್ತು ಜನಪರ ಯೋಜನೆಗಳು ಭಾರತದ ಸಾರ್ವಭೌಮತ್ವ ಹಾಗೂ ಪ್ರಗತಿಯನ್ನು ಎತ್ತಿಹಿಡಿದವು ಎಂದರು.

​ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಅವರು ಸಾರ್ವಜನಿಕ ಜೀವನದಲ್ಲಿ ಮಹಿಳಾ ನಾಯಕತ್ವಕ್ಕೆ ಹೊಸ ಆಯಾಮ ನೀಡಿದರು.

ಇಂದಿನ ದಿನಗಳಲ್ಲಿ ಆರ್ಥಿಕ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಕರೆ ನೀಡಿದರು.

​ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎನ್. ರಮೇಶ್, ರಮೇಶ್ ಶಂಕರಘಟ್ಟ, ಶ್ವೇತ ಬಂಡಿ, ಎಸ್. ಟಿ. ಹಾಲಪ್ಪ, ಆರ್. ಶಿವಣ್ಣ, ಡಾ. ಪ್ರದೀಪ್, ಯು. ಶಿವಾನಂದ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.