ಕಾರು ಚಾಲಕರಿಗೆ ಆಗುತ್ತಿರುವ ತಾರತಮ್ಯಕ್ಕೆ ಆಕ್ಷೇಪ – ಒಂದು ವಾರದಲ್ಲಿ ಸಮಸ್ಯೆ ಪರಿಹರಿಸುವುದಾಗಿ ಅಧಿಕಾರಿಗಳ ಭರವಸೆ
ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವಾಸಿ ಕಾರು ಚಾಲಕರಿಂದ ವಸೂಲಿ ಮಾಡಲಾಗುತ್ತಿರುವ ರೂ.50 ಪ್ರವೇಶ ಶುಲ್ಕ ಹಾಗೂ 30 ನಿಮಿಷಗಳ ನಂತರ ವಿಧಿಸಲಾಗುವ ರೂ.300 ದಂಡವನ್ನು ತಕ್ಷಣ ರದ್ದುಗೊಳಿಸುವಂತೆ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಒತ್ತಾಯಿಸಿದ್ದಾರೆ.
ಈ ಸಂಬಂಧ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರಯಾಣಿಕರನ್ನು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಬರಲು ಅಥವಾ ಅಲ್ಲಿಂದ ಕರೆದೊಯ್ಯಲು ಪ್ರವೇಶಿಸುವ ಪ್ರವಾಸಿ ಕಾರುಗಳಿಂದ ಪ್ರತಿ ಬಾರಿ ರೂ.50 ಶುಲ್ಕ ವಸೂಲಿ ಮಾಡುತ್ತಿರುವ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಖಾಸಗಿ ವಾಹನಗಳಿಗೆ ಇಂತಹ ಶುಲ್ಕ ವಿಧಿಸದೆ ಕೇವಲ ಪ್ರವಾಸಿ ಕಾರು ಚಾಲಕರಿಂದ ಮಾತ್ರ ಹಣ ವಸೂಲಿ ಮಾಡುತ್ತಿರುವುದು ತಾರತಮ್ಯದಿಂದ ಕೂಡಿದ ಕ್ರಮವಾಗಿದೆ. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಂತಹ ಶುಲ್ಕದ ವ್ಯವಸ್ಥೆ ಇಲ್ಲದಿರುವಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತ್ರ ಈ ನಿಯಮ ಜಾರಿಗೊಳಿಸಿರುವುದೇಕೆ ಎಂದು ಪ್ರಶ್ನಿಸಿದರು. ಈ ಶುಲ್ಕದಿಂದ ಚಾಲಕರ ಮೇಲೆ ಅನಗತ್ಯ ಆರ್ಥಿಕ ಹೊರೆ ಬೀಳುತ್ತಿದ್ದು, ಕೂಡಲೇ ರದ್ದುಗೊಳಿಸಬೇಕು. ಇಲ್ಲದಿದ್ದರೆ ಚಾಲಕರೊಂದಿಗೆ ಸೇರಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಅಳ್ವ ಮಾತನಾಡಿ, ಈ ಸಮಸ್ಯೆಯನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸ್ಥಳೀಯ ಪ್ರವಾಸಿ ಕಾರು ಚಾಲಕರು ವಿಮಾನ ನಿಲ್ದಾಣದ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಆಡಳಿತದ ಕರ್ತವ್ಯವಾಗಿದೆ ಎಂದರು.
ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಬಿನ್ನು ವರ್ಗೀಸ್ ಮಾತನಾಡಿ, ಕಾರು ಚಾಲಕರು ವಿಮಾನ ನಿಲ್ದಾಣದ ಆಡಳಿತದೊಂದಿಗೆ ಸಹಕರಿಸಿದಲ್ಲಿ ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇದೇ ವೇಳೆ ವಿಮಾನ ನಿಲ್ದಾಣದೊಳಗೆ 30 ನಿಮಿಷಗಳಿಗಿಂತ ಹೆಚ್ಚು ಸಮಯವಾದಲ್ಲಿ ರೂ.300 ಶುಲ್ಕ ವಿಧಿಸುತ್ತಿರುವ ನಿಯಮಕ್ಕೂ ಚಾಲಕರು ವಿರೋಧ ವ್ಯಕ್ತಪಡಿಸಿದರು. ಕೆಲವೊಮ್ಮೆ ವಾಹನ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್ನಿಂದಾಗಿ ನಿಗದಿತ ಸಮಯದೊಳಗೆ ವಿಮಾನ ನಿಲ್ದಾಣದಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಇಂತಹ ಅನಿವಾರ್ಯ ಸಂದರ್ಭಗಳಲ್ಲಿಯೂ ದಂಡ ವಿಧಿಸುವುದು ಚಾಲಕರಿಗೆ ಆರ್ಥಿಕ ಹೊರೆಯಾಗುತ್ತಿದೆ. ಆದ್ದರಿಂದ ಈ ನಿಯಮವನ್ನೂ ಮರುಪರಿಶೀಲಿಸಿ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
ಈ ಕುರಿತು ವಿಮಾನ ನಿಲ್ದಾಣದ ಮಾನವ ಸಂಪನ್ಮೂಲ ವಿಭಾಗದ (ಎಚ್ಆರ್) ಅಧಿಕಾರಿ ರವಿ ಅವರು ಒಂದು ವಾರದೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅಂತಿಮವಾಗಿ ಕಿಶೋರ್ ಅಳ್ವ ಅವರ ಭರವಸೆಯಂತೆ ಪ್ರವಾಸಿ ಕಾರು ಚಾಲಕರ ಸಮಸ್ಯೆಗಳನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳಿಗೆ ಹಾಗೂ ಐವನ್ ಡಿ’ಸೋಜಾ ಅವರಿಗೆ ಪ್ರವಾಸಿ ಕಾರು ಚಾಲಕರ ಸಂಘದ ವತಿಯಿಂದ ಧನ್ಯವಾದ ಸಲ್ಲಿಸಲಾಯಿತು.
ಸಭೆಯಲ್ಲಿ ವಿಮಾನ ನಿಲ್ದಾಣದ ಸಿಇಒ ಬಿನ್ನು ವರ್ಗೀಸ್, ಎಚ್ಆರ್ ವಿಭಾಗದ ರವಿ, ಮಂಗಳೂರು ಟೂರಿಸ್ಟ್ ಡ್ರೈವರ್ಸ್ ಅಸೋಸಿಯೇಷನ್ನ ಹರಿಶ್ಚಂದ್ರ, ಶುಭಕರ ಶೆಟ್ಟಿ, ಅಬೆಲ್ ಡಿಸೋಜ, ರಮೇಶ್, ರೋಷನ್, ದಿನೇಶ್ ಕಂಕನಾಡಿ, ಸತೀಶ್ ದಯಾನಂದ ಸಾಲಿಯಾನ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

