ಪತ್ರಕರ್ತರಿಗೆ ಅಂಚೆ ಇಲಾಖೆಯ ಅಪಘಾತ ಸುರಕ್ಷಾ ವಿಮೆ ನೋಂದಣಿ ಕಾರ್ಯಕ್ರಮ

0
21

ಮೂಡುಬಿದಿರೆ : ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರಿಗಾಗಿ ಸಮಗ್ರ ಅಪಘಾತ ಸುರಕ್ಷಾ ವಿಮೆ ನೋಂದಣಿ ಕಾರ್ಯಕ್ರಮವು ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಜಿಲ್ಲಾ ವ್ಯಾಪ್ತಿಯ ಎಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಹಲವು ವರ್ಷಗಳಿಂದ ಜಿಲ್ಲಾ ಸಂಘದ ವತಿಯಿಂದ ಅಪಘಾತ ವಿಮೆ ಪಾಲಿಸಿಯನ್ನು ನೋಂದಾಯಿಸಿಕೊಂಡು ಬರಲಾಗುತ್ತಿದೆ. ಇದರ ಪ್ರೀಮಿಯಂ ಮೊತ್ತವನ್ನು ಜಿಲ್ಲಾ ಸಂಘದ ಕ್ಷೇಮ ನಿಧಿಯಿಂದ ಭರಿಸಲಾಗುತ್ತಿದೆ ಎಂದು ತಿಳಿಸಿದರು.

ಅಂಚೆ ಇಲಾಖೆಯ ಮಾರುಕಟ್ಟೆ ಅಧಿಕಾರಿ ಗುರುಪ್ರಸಾದ್ ಮಾತನಾಡಿ, ಸುದ್ದಿ ಸಂಗ್ರಹಕ್ಕಾಗಿ ಸದಾ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುವ ಪತ್ರಕರ್ತರಿಗೆ ಅಂಚೆ ಇಲಾಖೆಯ ಅಪಘಾತ ಸುರಕ್ಷಾ ವಿಮೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಕನಿಷ್ಠ ಪ್ರೀಮಿಯಂನಲ್ಲಿ ಗರಿಷ್ಠ ಮೊತ್ತದ ವಿಮಾ ಸೌಲಭ್ಯ ಒದಗಿಸುವ ಈ ಪಾಲಿಸಿಯನ್ನು ಸಮಾಜದ ಎಲ್ಲಾ ವರ್ಗದವರೂ ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸದಸ್ಯರಿಗೆ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಕಾರ್ಡ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಮೂಡುಬಿದಿರೆ ಪ್ರೆಸ್‌ಕ್ಲಬ್ ಅಧ್ಯಕ್ಷ ಸೀತಾರಾಮ ಆಚಾರ್ಯ ಹಾಗೂ ಅಂಚೆ ಸಿಬ್ಬಂದಿ ಅರವಿಂದ್ ಉಪಸ್ಥಿತರಿದ್ದರು. ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್ ಸ್ವಾಗತಿಸಿದರು. ಪ್ರೆಸ್‌ಕ್ಲಬ್ ಕಾರ್ಯದರ್ಶಿ ಪ್ರೇಮಶ್ರೀ ವಂದಿಸಿದರು.