ಮಂಗಳೂರು : ಎನ್ಪಿಸಿಐ ಭಾರತ್ ಬಿಲ್ಪೇ ಲಿಮಿಟೆಡ್ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಅಂಗಸಂಸ್ಥೆಯಾದ ನಬಾರ್ಡ್ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್ ಅನ್ನು ಸಾಲ ಮರುಪಾವತಿ ವಿಭಾಗದಡಿ ಭಾರತ್ ಕನೆಕ್ಟ್ ವೇದಿಕೆಗೆ ಸೇರ್ಪಡೆಗೊಳಿಸಿದೆ.
ಈ ಏಕೀಕರಣದ ಮೂಲಕ ನ್ಯಾಬ್ಫಿನ್ಸ್ನ ಸಾಲಗಾರರು ಭಾರತ್ ಕನೆಕ್ಟ್ ಸೌಲಭ್ಯ ಹೊಂದಿರುವ ವ್ಯಾಪಕ ಜಾಲದ ವಿವಿಧ ಮಾರ್ಗಗಳ ಮೂಲಕ ತಮ್ಮ ಸಾಲದ ಮಾಸಿಕ ಕಂತುಗಳನ್ನು ಹಾಗೂ ಬಾಕಿ ಉಳಿದಿರುವ ಕಂತುಗಳನ್ನು ಸುಲಭವಾಗಿ ಪಾವತಿಸಬಹುದಾಗಿದೆ. ಗ್ರಾಹಕರು ಇದೀಗ ದೇಶಾದ್ಯಂತ 1,000ಕ್ಕೂ ಹೆಚ್ಚು ಬ್ಯಾಂಕಿಂಗ್ ಮತ್ತು ಪಾವತಿ ಆ್ಯಪ್ಗಳು ಹಾಗೂ ಎಂಟು ಲಕ್ಷಕ್ಕೂ ಅಧಿಕ ಭೌತಿಕ ಏಜೆಂಟ್ ಕೇಂದ್ರಗಳ ಮೂಲಕ ಪಾವತಿ ಸೌಲಭ್ಯವನ್ನು ಪಡೆಯಬಹುದು. ಇದರಿಂದ ಪ್ರಸ್ತುತ ಲಭ್ಯವಿರುವ ಸೀಮಿತ ಡಿಜಿಟಲ್ ಪಾವತಿ ಮಾರ್ಗಗಳ ವ್ಯಾಪ್ತಿಯನ್ನು ಮೀರಿ, ಗ್ರಾಹಕರಿಗೆ ಪಾವತಿಗಾಗಿ ಹೆಚ್ಚಿನ ಆಯ್ಕೆಗಳು ಲಭ್ಯವಾಗಲಿವೆ ಎಂದು ವ್ಯವಸ್ಥಾಪಕ ನಿರ್ದೇಶಕ ಡಾ. ವೈ. ಹರಗೋಪಾಲ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಹೊಸ ವ್ಯವಸ್ಥೆಯಡಿ ನ್ಯಾಬ್ಫಿನ್ಸ್ ಸಾಲಗಾರರು ತಮಗೆ ಅನುಕೂಲಕರವಾದ ಡಿಜಿಟಲ್ ಅಥವಾ ಸಹಾಯಾಧಾರಿತ ಪಾವತಿ ಮಾರ್ಗಗಳ ಮೂಲಕ ಸಾಲದ ಕಂತುಗಳನ್ನು ಮರುಪಾವತಿಸಬಹುದಾಗಿದೆ. ಈ ಸೌಲಭ್ಯದ ವಿಸ್ತರಣೆಯಿಂದ ನಿಯಮಿತ ಸಾಲದ ಕಂತುಗಳು ಹಾಗೂ ತಪ್ಪಿಹೋದ ಕಂತುಗಳ ಪಾವತಿ ಪ್ರಕ್ರಿಯೆ ಸರಳಗೊಳ್ಳಲಿದೆ. ಜತೆಗೆ, ಪಾವತಿ ವಿಳಂಬವನ್ನು ಕಡಿಮೆ ಮಾಡುವುದರೊಂದಿಗೆ ಗ್ರಾಹಕರಿಗೆ ಹೆಚ್ಚು ಅನುಕೂಲಕರ, ಸರಳ ಮತ್ತು ತಡೆರಹಿತ ಮರುಪಾವತಿ ಅನುಭವವನ್ನು ಒದಗಿಸಲು ಸಹಕಾರಿಯಾಗಲಿದೆ ಎಂದು ವಿವರಿಸಿದ್ದಾರೆ.
ಈ ಏಕೀಕರಣಕ್ಕೆ ಬಿಲ್ ಪಾವತಿ ಕಾರ್ಯಾಚರಣೆ ಘಟಕವಾಗಿ ಕೆನರಾ ಬ್ಯಾಂಕ್ ಸಹಕಾರ ನೀಡಿದೆ. ಈ ಬೆಳವಣಿಗೆಯು ಕಿರುಬಂಡವಾಳ ವಲಯದಲ್ಲಿ ಸುಲಭವಾಗಿ ಲಭ್ಯವಾಗುವ ಡಿಜಿಟಲ್ ಹಾಗೂ ಸಹಾಯಾಧಾರಿತ ಸಾಲ ಮರುಪಾವತಿ ಆಯ್ಕೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
