ನ.1ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ದಿನಾಚರಣೆ

0
5

ಕನ್ನಡ ಭಾಷೆ ಉಳಿಸಿ ಬೆಳೆಸಲು ಕೇರಳ ಸರಕಾರಕ್ಕೆ ಮನವಿ – ಮುಂದಿನ ಬಜೆಟ್‌ನಲ್ಲಿ ಸಮಗ್ರ ಕನ್ನಡ ಸಾಂಸ್ಕೃತಿಕ ಯೋಜನೆ ಘೋಷಿಸಲು ಆಗ್ರಹ

ಕಾಸರಗೋಡು: ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕಾಸರಗೋಡು ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಕೇರಳ ರಾಜ್ಯ ಘಟಕದ ಸಹಯೋಗದಲ್ಲಿ ನವೆಂಬರ್ 1ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.

2026ರ ನವೆಂಬರ್ 1ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕಳೆದ 36 ವರ್ಷಗಳಿಂದ ನಿರಂತರವಾಗಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಮತ್ತು ಜಿಲ್ಲಾ ಕನ್ನಡ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಈ ದಿನದ ಅಂಗವಾಗಿ ಕಾಸರಗೋಡು ಜಿಲ್ಲೆಯಾದ್ಯಂತ ಕನ್ನಡಪರ ಸಂಘ ಸಂಸ್ಥೆಗಳು ಹಾಗೂ ಕನ್ನಡಿಗರು ಸ್ವಯಂಪ್ರೇರಿತರಾಗಿ ಕನ್ನಡ ಪ್ರತಿಜ್ಞೆ ಕೈಗೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.

‘ಕನ್ನಡ ನನ್ನ ಭಾಷೆ, ಕನ್ನಡ ಸಂಸ್ಕೃತಿಗೆ ನಾನು ಅಭಿಮಾನ ಪಡುತ್ತೇನೆ. ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಯನ್ನು ನಾನು ಗೌರವಿಸುತ್ತೇನೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನಾನು ಸದಾ ಸಿದ್ಧನಿದ್ದೇನೆ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ’ ಎಂಬ ಪ್ರತಿಜ್ಞೆಯನ್ನು ಕೈಗೊಂಡು ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಲಾಗಿದೆ.

ಕೇರಳ ಸರಕಾರಕ್ಕೆ ಕನ್ನಡ ಸಾಂಸ್ಕೃತಿಕ ಯೋಜನೆಗೆ ಮನವಿ

ಕೇರಳ ರಾಜ್ಯದಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸಮಗ್ರ ಕನ್ನಡ ಸಾಂಸ್ಕೃತಿಕ ಯೋಜನೆಯನ್ನು ರೂಪಿಸಿ ಮುಂದಿನ ರಾಜ್ಯ ಬಜೆಟ್‌ನಲ್ಲಿ ಘೋಷಿಸಬೇಕೆಂದು ಕೇರಳ ಸರಕಾರಕ್ಕೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮನವಿ ಮಾಡಿದೆ.

10 ಕೋಟಿ ರೂ. ವೆಚ್ಚದಲ್ಲಿ ಕೇರಳ-ಕರ್ನಾಟಕ ಭವನ ನಿರ್ಮಾಣ

ಕಾಸರಗೋಡು ಕನ್ನಡ ಗ್ರಾಮದಲ್ಲಿ 2026ರ ನವೆಂಬರ್ 28 ಮತ್ತು 29ರಂದು ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ-2026, ಕೇರಳ-ಕರ್ನಾಟಕ ಉತ್ಸವ ಹಾಗೂ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವ ನಡೆಯಲಿದೆ.

ಈ ಸಂದರ್ಭದಲ್ಲಿ ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕೇರಳ-ಕರ್ನಾಟಕ ಭವನದ ಶಿಲಾನ್ಯಾಸ ಸಮಾರಂಭವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕೇರಳ ರಾಜ್ಯದ ಮುಖ್ಯಮಂತ್ರಿ, ಸಚಿವರು, ಕಾಸರಗೋಡು ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.