ಬಂಟ್ವಾಳ: ಬಾಳ್ತಿಲ ಗ್ರಾಮದ ಕಲ್ಲಗುಡ್ಡೆ–ಕಿಂಞನ ಬೈಲು ಪರಿಸರದಲ್ಲಿ ಅಕ್ರಮವಾಗಿ ಸ್ಫೋಟಕ ಬಳಸಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಸ್ಥಳೀಯ ನಾಗರಿಕರು, ಗಣಿಗಾರಿಕೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ತಾಲೂಕು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ಈ ಪರಿಸರದಲ್ಲಿ ಸುಮಾರು 15 ಮನೆಗಳಿದ್ದು, ವೃದ್ಧರು, ಅನಾರೋಗ್ಯ ಪೀಡಿತರು, ಎರಡು ತಿಂಗಳ ಹಸುಗೂಸು ಹಾಗೂ ಶಾಲಾ ಮಕ್ಕಳು ವಾಸವಾಗಿದ್ದಾರೆ. ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೆ ನಂಬರ್ 159/3ರ ಸುತ್ತಮುತ್ತ ಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದು, ಗಣಿಗಾರಿಕೆಗೆ ಅತ್ಯಾಧುನಿಕ ಸ್ಫೋಟಕಗಳನ್ನು ಬಳಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸ್ಫೋಟಕ ಬಳಕೆಯಿಂದ ಮನೆಗಳಲ್ಲಿ ವಾಸಿಸುವವರಿಗೆ ತೀವ್ರ ತೊಂದರೆಯಾಗುತ್ತಿದ್ದು, ಈ ಬಗ್ಗೆ ಗಣಿಗಾರಿಕೆ ನಡೆಸುವವರಿಗೆ ಹಲವು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾರ್ವಜನಿಕರ ಸುರಕ್ಷತೆ ಹಾಗೂ ನೆಮ್ಮದಿಯ ಜೀವನಕ್ಕೆ ಧಕ್ಕೆಯಾಗದಂತೆ ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಲ್ಲಗುಡ್ಡೆ–ಕಿಂಜನ ಬೈಲು ಪರಿಸರದ ನಾಗರಿಕರು ಆಗ್ರಹಿಸಿದ್ದಾರೆ.
