ಪಡುಬಿದ್ರಿ : ಹದಿನಾರುಪಟ್ನ ಮೊಗವೀರ ಮಹಾಸಭೆಯ 2026–2029ನೇ ಸಾಲಿನ ಅವಧಿಗೆ ನೂತನ ಅಧ್ಯಕ್ಷರಾಗಿ ಪಡುಬಿದ್ರಿಯ ಸಮಾಜಸೇವಕ ಅಶೋಕ್ ಸಾಲ್ಯಾನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಮಾಜಮುಖಿ ಕಾರ್ಯಗಳು, ಸಂಘಟನಾ ಚಾತುರ್ಯ ಹಾಗೂ ಜನಪರ ಕಾಳಜಿಯ ಮೂಲಕ ಗುರುತಿಸಿಕೊಂಡಿರುವ ಅಶೋಕ್ ಸಾಲ್ಯಾನ್ ಅವರು ಹಲವು ಸಂಘ-ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಅವರು ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾ (ರಿ.)ದ ಅಧ್ಯಕ್ಷರಾಗಿದ್ದು, ಈ ಹಿಂದೆ ಪಡುಬಿದ್ರಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ, ಕಾಡಿಪಟ್ನ ನಡಿಪಟ್ನ ವಿದ್ಯಾ ಪ್ರಚಾರಕ ಸಂಘ (ರಿ.)ದ ಉಪಾಧ್ಯಕ್ಷರಾಗಿ ಹಾಗೂ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಾಮದ ಅಭಿವೃದ್ಧಿ ಹಾಗೂ ಸಮಾಜದ ಏಳಿಗೆಗಾಗಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಮಹಾಸಭೆಯ ನೂತನ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ಲಕ್ಷ್ಮಣ್ ಸುವರ್ಣ ಎರ್ಮಾಳ್, ಪ್ರಧಾನ ಕಾರ್ಯದರ್ಶಿಯಾಗಿ ಲಾಲಾಜಿ ಪುತ್ರನ್ ಕಾಪು, ಜೊತೆ ಕಾರ್ಯದರ್ಶಿಯಾಗಿ ಹಾರ್ಥಿಕ್ ಮೂಳೂರು, ಕೋಶಾಧಿಕಾರಿಯಾಗಿ ಲಲಿತ್ ಕುಮಾರ್ ಹಾಗೂ ಲೆಕ್ಕಪರಿಶೋಧಕರಾಗಿ ಸುಧಾಕರ್ ಕರ್ಕೇರ ಹೆಜಮಾಡಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮೊಗವೀರ ಸಮಾಜದ ಏಕತೆ, ಸಂಘಟನೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ವಿಶ್ವಾಸವನ್ನು ಸಮಾಜದ ಬಂಧುಗಳು ವ್ಯಕ್ತಪಡಿಸಿದ್ದಾರೆ. ಅಶೋಕ್ ಸಾಲ್ಯಾನ್ ಅವರ ಆಯ್ಕೆಗೆ ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾ (ರಿ.) ಹಾಗೂ ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.

