ಮೂಡುಬಿದಿರೆ: ಮನೆ ಎಂಬುದು ಮಕ್ಕಳ ಮೊದಲ ಪಾಠಶಾಲೆಯಾಗಿದ್ದು, ಪೋಷಕರಿಂದಲೇ ಉತ್ತಮ ಸಂಸ್ಕಾರ ಕಲಿಯಬೇಕು. ಹೆತ್ತವರ ಮಾತಿಗೆ ಬೆಲೆ ನೀಡಿ, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯತ್ ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಆಳ್ವಾಸ್ ಕಾಲೇಜು ಮೂಡುಬಿದಿರೆ ಇದರ ನೇತೃತ್ವದಲ್ಲಿ, ಇರುವೈಲು ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ‘ವ್ಯಸನ ಮತ್ತು ಕ್ಷಯರೋಗ ಮುಕ್ತ ಯುವಜನತೆ’ ಎಂಬ ಆಶಯದೊಂದಿಗೆ ಆಯೋಜಿಸಲಾದ ವಾರ್ಷಿಕ ವಿಶೇಷ ಎನ್ಎಸ್ಎಸ್ ಶಿಬಿರದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಾಹನಗಳಲ್ಲಿ ಸಂಚರಿಸುವಾಗ ಅತಿವೇಗಕ್ಕೆ ಕಡಿವಾಣ ಹಾಕಬೇಕು. ನಿಮ್ಮ ಮನೆಗಳಲ್ಲಿ ಕುಟುಂಬದವರು ನಿಮಗಾಗಿ ಕಾಯುತ್ತಿರುತ್ತಾರೆ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತೆ ನಿಶಾ ಇರುವೈಲು ಮಾತನಾಡಿ, ಶಿಬಿರದ ಐದು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ಎನ್ಎಸ್ಎಸ್ ಶಿಬಿರದ ಸದುಪಯೋಗ ಪಡೆದುಕೊಂಡು, ಸೇವಾ ಮನೋಭಾವ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಪಂಚಾಯತ್ ಸದಸ್ಯ ನಾಗೇಶ್ ಅಮೀನ್, ದಿನೇಶ್ ಶೆಟ್ಟಿ ದೊಡ್ಡಗುತ್ತು, ಎಸ್ಡಿಎಂಸಿ ಉಪಾಧ್ಯಕ್ಷೆ ಮರಿಯಾ ಲೂಸಿಯಾ ನೊರೊನ್ಹ, ಫಲ್ಗುಣಿ ಯುವಕ ಮಂಡಲದ ಅಧ್ಯಕ್ಷ ಸುಧೇಶ್, ತುಷಾರ್ ಆರ್.ವಿ., ಶಿಬಿರಾಧಿಕಾರಿ ಸುದೀಪ್ ಬುನ್ನನ್ ಹಾಗೂ ವಸುಧಾ ಭಟ್ ಉಪಸ್ಥಿತರಿದ್ದರು.
ಮಾನ್ಯ ಹೆಗ್ಡೆ ನಿರೂಪಿಸಿದರು. ಕ್ಷಮಾ ಸ್ವಾಗತಿಸಿದರು. ಅಪೇಕ್ಷಾ ಡಿ. ಪೂಜಾರಿ ವಂದಿಸಿದರು.

