ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪ ಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕಾಸರಗೋಡು ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ನವಂಬರ್ 1 ರಂದು ನಡೆದ ಕಾಸರಗೋಡು ಜಿಲ್ಲಾ ಕನ್ನಡ ರಾಜ್ಯೋತ್ಸವ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ವಹಿಸಿದರು. ಕಾಸರಗೋಡು ನಗರ ಸಭಾ ಕೌನ್ಸಿಲರ್ ಶಾರದಾ. ಬಿ ಕನ್ನಡ ಧ್ವಜಾರೋಹಣ ಗೈದು ಉದ್ಘಾಟಿಸಿದರು.
ಕಾಸರಗೋಡು ಜಿಲ್ಲಾ ಕನ್ನಡ ದಿನಾಚರಣೆಯಂದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕಾಸರಗೋಡು ಜಿಲ್ಲೆಯಾದ್ಯಂತ ಕನ್ನಡಪರ ಸಂಘ ಸಂಸ್ಥೆಗಳಲ್ಲಿ ಕನ್ನಡಿಗರು ಸ್ವಯಂ ಪ್ರೇರಿತರಾಗಿ ಕನ್ನಡ ಪ್ರತಿಜ್ಞೆಯನ್ನು ಕೈಗೊಳ್ಳಬೇಕೆಂದು ದಾಸ ಸಂಕೀರ್ತನಕಾರ, ಹರಿದಾಸ ಜಯಾನಂದ ಕುಮಾರ ಕಾಸರಗೋಡು ಕರೆನೀಡಿದರು. ಕೆ. ಎನ್. ವೆಂಕಟರಮಣ ಹೊಳ್ಳ ಕಾಸರಗೋಡು, ಬಿ. ಸತೀಶ ಕೂಡ್ಲು ಶುಭಾಶಂಸನೆಗೈದರು.
ವರ್ಷಂಪ್ರತಿ ಕಳೆದ 36 ವರ್ಷಗಳಿಂದ ನಿರಂತರವಾಗಿ ನವಂಬರ್ 1ರಂದು ನಡೆಯುವ ಕನ್ನಡ ರಾಜ್ಯೋತ್ಸವ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ದಿನಾಚರಣೆ ಕಾರ್ಯಕ್ರಮದಲ್ಲಿ ಕನ್ನಡ ನನ್ನ ಭಾಷೆ ,ಕನ್ನಡ ಸಂಸ್ಕೃತಿಗೆ ನಾನು ಅಭಿಮಾನ ಪಡುತ್ತೇನೆ ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಯನ್ನು ನಾನು ಗೌರವಿಸುತ್ತೇನೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನಾನು ಸದಾ ಸಿದ್ದನಿದ್ದೇನೆ.” ಸಿರಿಗನ್ನಡಂ ಗೆಲ್ಗೆ -ಸಿರಿಗನ್ನಡಂ ಬಾಳ್ಗೆ” ಎಂಬ ಕನ್ನಡ ಪ್ರತಿಜ್ಞೆಯನ್ನು ಕನ್ನಡ ಸಂಘಟಕ, ಗಾಯಕ ಪಿ. ದಿವಾಕರ ಕಾಸರಗೋಡು ಬೋಧಿಸಿದರು.
ಕೇರಳ ಸರಕಾರಕ್ಕೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಮನವಿ:-ಕೇರಳ ಸರಕಾರವು ಕನ್ನಡ ಭಾಷೆ, ಸಾಹಿತ್ಯ ,ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಮಗ್ರವಾದ ಕನ್ನಡ ಸಾಂಸ್ಕೃತಿಕ ಕನ್ನಡೀಕರಣ ಯೋಜನೆಯನ್ನು ಸಿದ್ಧಪಡಿಸಿ ಮುಂದಿನ ಬಜೆಟ್ ನಲ್ಲಿ ಘೋಷಿಸಬೇಕು ಕಾಸರಗೋಡು ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ ಕಾರ್ಯಪ್ರವೃತರಾಗಬೇಕು ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ನವೆಂಬರ್ 28 ಮತ್ತು 29 ರಂದು ನಡೆಯುವ ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ- 2026, ಕೇರಳ -ಕರ್ನಾಟಕ ಉತ್ಸವ ,ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವದಲ್ಲಿ ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕೇರಳ- ಕರ್ನಾಟಕ ಭವನ, ಶಿಲಾನ್ಯಾಸ ಸಮಾರಂಭಕ್ಕೆ ಕೇರಳ , ಕರ್ನಾಟಕ ಹಾಗೂ ವಿವಿಧ ರಾಜ್ಯಗಳ ಕನ್ನಡ ಸಂಘ ಸಂಸ್ಥೆಗಳು , ಶಾಲಾ ಕಾಲೇಜುಗಳಿಂದ ಒಂದುಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಕನ್ನಡ ಸಮಾರಂಭಕ್ಕೆ ಕೇರಳ ಸರಕಾರದ ಮುಖ್ಯಮಂತ್ರಿ, ಸಚಿವರು, ಕಾಸರಗೋಡು ಜಿಲ್ಲೆಯ ಎಲ್ಲಾ ಶಾಸಕರು ಕಾಸರಗೋಡು ಜಿಲ್ಲಾ ಉಸ್ತುವಾರಿ ಸಚಿವರನ್ನು ಆಮಂತ್ರಿಸಲು ತೀರ್ಮಾನಿಸಲಾಗಿದೆ ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಹೇಳಿದ್ದಾರೆ. ಕುಶಲ ಕುಮಾರ. ಕೆ ಕನ್ನಡ ಗ್ರಾಮ ಕಾರ್ಯಕ್ರಮವನ್ನು ಸಂಯೋಜಿಸಿದರು.

