ಮಹಾರಾಷ್ಟ್ರದ ಪೆಣ್‌ನಲ್ಲಿ ಕನ್ನಡ ಸಾಮಾಜಿಕ ಸಂಸ್ಥೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

0
5

ನಾಡು-ನುಡಿ ಸಂಭ್ರಮಕ್ಕೆ ಸಾಕ್ಷಿಯಾದ ಸಾಂಸ್ಕೃತಿಕ ಕಾರ್ಯಕ್ರಮ

ಮಹಾರಾಷ್ಟ್ರ: ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಅಭಿಮಾನವನ್ನು ಹೊರನಾಡಿನಲ್ಲೂ ಪಸರಿಸುವ ಉದ್ದೇಶದಿಂದ ಕನ್ನಡ ಸಾಮಾಜಿಕ ಸಂಸ್ಥೆ ಪೆಣ್ (ರಿ.) ವತಿಯಿಂದ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಪೆಣ್‌ನ ವಾಸ್ತ ಪ್ಯಾಲೇಸ್‌ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಸತೀಶ್ ಶೆಟ್ಟಿ ಹಾಗೂ ಉಪಾಧ್ಯಕ್ಷ ಸಂತೋಷ್ ಎಚ್.ಎ. ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಬಿಜೂರಾಜ್ ಸಾಲಿಯಾನ್ ಅವರು ನಾಡಧ್ವಜಕ್ಕೆ ವಂದನೆ ಸಲ್ಲಿಸುವ ಗೀತೆಯನ್ನು ಹಾಡಿದರು.

ಸಂಸ್ಥೆಯ ಕಾರ್ಯದರ್ಶಿ ಬಿಜೂರಾಜ್ ಸಾಲಿಯಾನ್ ಅವರು ಕರ್ನಾಟಕ ರಾಜ್ಯೋತ್ಸವದ ಮಹತ್ವ, ಕನ್ನಡ ಭಾಷೆ ಹಾಗೂ ನಾಡಿನ ಸಂಸ್ಕೃತಿಯ ಕುರಿತು ಮಾತನಾಡಿದರು. ಫಕ್ಕಿರೇಶ್ ಹೊಂಬಳಾಡ್, ಬಿಜೂರಾಜ್ ಸಾಲಿಯಾನ್ ಹಾಗೂ ಫಕ್ಕಿರೇಶ್ ಮಾಗಳಾಡ್ ಅವರು ನಾಡಗೀತೆಗಳನ್ನು ಹಾಡಿ ಸಭಿಕರ ಗಮನ ಸೆಳೆದರು.

ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕನ್ನಡದ ನಾಡು-ನುಡಿ, ಸಂಸ್ಕೃತಿಯನ್ನು ಬಿಂಬಿಸಿದ ಕಾರ್ಯಕ್ರಮಗಳು ರಾಜ್ಯೋತ್ಸವದ ಸಂಭ್ರಮವನ್ನು ಹೆಚ್ಚಿಸಿದವು. ಕೊನೆಯಲ್ಲಿ ರಾಷ್ಟ್ರಗೀತೆ ‘ಜನಗಣಮನ’ದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷ ಸತೀಶ್ ಶೆಟ್ಟಿ, ಉಪಾಧ್ಯಕ್ಷ ಸಂತೋಷ್ ಎಚ್.ಎ., ಬಿಜೂರಾಜ್ ಸಾಲಿಯಾನ್, ಹರೀಶ್ ಶೆಟ್ಟಿ, ಜಗನ್ನಾಥ್ ಶೆಟ್ಟಿ, ನವೀನ್ ಶೆಟ್ಟಿ, ನಿಖಿಲ್ ಶೆಟ್ಟಿ, ಶಿವರಾಜ್ ಪೂಜಾರಿ, ಫಕ್ಕಿರೇಶ್ ಹೊಂಬಳಾಡ್, ಫಕ್ಕಿರೇಶ್ ಮಾಗಳಾಡ್, ಕೃಷ್ಣಮೂರ್ತಿ ಶೇರುಗಾರ್, ನಾಗಪ್ಪ ಬಿರಾದರ, ಜಿ.ಕೆ. ಮೂರ್ತಿ ಹಾಗೂ ಅಮ್ರಿತ್ ಸೂರ್ಯವಂಶಿ ಸೇರಿದಂತೆ ಹಲವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದರು.

ಮಹಾರಾಷ್ಟ್ರದ ನೆಲದಲ್ಲೂ ಕನ್ನಡದ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ವರದಿ: ಬಿಜೂರಾಜ್ ಸಾಲಿಯಾನ್