ಅಕ್ಕಿ ಖರೀದಿಗೂ ಹಿಂದೇಟು ಹಾಕುವ ಸ್ಥಿತಿ : ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಿರುಗಾಳಿ

0
3

ಬೆಂಗಳೂರು : ರಾಜ್ಯದಲ್ಲಿ ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ ಎರಡು-ಮೂರು ತಿಂಗಳ ಅವಧಿಯಲ್ಲಿ ಶೇ. 25ರಿಂದ 30ರಷ್ಟು ಹೆಚ್ಚಳವಾಗಿದೆ. ಕೆಲವು ಅಕ್ಕಿ ಪ್ರಭೇದಗಳ ಬೆಲೆ ಪ್ರತಿ ಕೆಜಿಗೆ 100 ರೂ. ಗಡಿ ದಾಟಿದ್ದು, ಸಾಮಾನ್ಯ ಜನರ ಅಡುಗೆ ಮನೆಯ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ.

ಮುಂಗಾರು ಮಳೆಯ ಕೊರತೆಯಿಂದಾಗಿ ರಾಜ್ಯದ ಪ್ರಮುಖ ಭತ್ತ ಬೆಳೆಯುವ ಪ್ರದೇಶಗಳಲ್ಲಿ ನಾಟಿ ಪ್ರಮಾಣ ಹಾಗೂ ಇಳುವರಿ ಕುಸಿದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ. ವಿಶೇಷವಾಗಿ ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಭತ್ತದ ನಾಟಿ ಕಡಿಮೆಯಾಗಿರುವುದರಿಂದ ಮಾರುಕಟ್ಟೆಯಲ್ಲಿ ಅಕ್ಕಿಯ ಪೂರೈಕೆಯ ಮೇಲೆ ಪರಿಣಾಮ ಬೀರಿದೆ.

ಸೋನಾ ಮಸೂರಿ, ಸ್ಟೀಮ್ ರೈಸ್, ಕೊಲಂ ರೈಸ್, ಬಾಸ್ಮತಿ, ಜೀರಾ ರೈಸ್ ಹಾಗೂ ರಾಜ್ಮುಡಿ ಸೇರಿದಂತೆ ವಿವಿಧ ಅಕ್ಕಿ ಪ್ರಭೇದಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಬೆಲೆ ಏರಿಕೆಯಿಂದ ಗ್ರಾಹಕರು ಸಂಕಷ್ಟ ಅನುಭವಿಸುತ್ತಿದ್ದು, ಅಕ್ಕಿಯ ಕೊರತೆಯ ಆತಂಕ ಹೋಟೆಲ್ ಉದ್ಯಮವನ್ನೂ ಕಾಡುತ್ತಿದೆ. ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ತಯಾರಿಕಾ ವೆಚ್ಚ ಹೆಚ್ಚಾಗುವ ಸಾಧ್ಯತೆಯೂ ಎದುರಾಗಿದೆ.

ಅಕ್ರಮ ದಾಸ್ತಾನು ವಿರುದ್ಧ ಸರ್ಕಾರದ ಕ್ರಮ:

ಇನ್ನೊಂದೆಡೆ, ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಅಕ್ರಮ ದಾಸ್ತಾನುದಾರರಿಗೆ ಎಚ್ಚರಿಕೆ ನೀಡಿರುವ ಆಹಾರ ಸಚಿವ ರಿಜ್ವಾನ್ ಅರ್ಷದ್, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಸುಮಾರು 18 ಲಕ್ಷ ಕೆ.ಜಿ. ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಅಕ್ರಮ ದಾಸ್ತಾನು ಪ್ರಕರಣಗಳಿಗೆ ಸಂಬಂಧಿಸಿದಂತೆ 232ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಮಳೆಯ ಕೊರತೆ, ಭತ್ತದ ಇಳುವರಿ ಕುಸಿತ ಹಾಗೂ ಮಾರುಕಟ್ಟೆಯಲ್ಲಿನ ಪೂರೈಕೆ ಸಮಸ್ಯೆಯಿಂದ ಅಕ್ಕಿ ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ಆತಂಕ ತಂದಿದೆ. ಮುಂದಿನ ದಿನಗಳಲ್ಲಿ ಬೆಲೆ ನಿಯಂತ್ರಣಕ್ಕೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.