ಉಡುಪಿ: ಪ್ರಜಾಪ್ರಭುತ್ವದ ಮೌಲ್ಯಗಳು, ಸಂವಿಧಾನದ ಆಶಯಗಳು ಹಾಗೂ ಮತದಾನದ ಪಾವಿತ್ರ್ಯವನ್ನು ರಕ್ಷಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ‘ವೋಟ್ ಚೋರಿ–ದೇಶ್ ಬಚಾವೋ’ ಅಭಿಯಾನದಡಿ ಗುರುವಾರ ಪ್ರತಿಭಟನೆ ಮತ್ತು ಜಾಥಾ ನಡೆಯಿತು.
ಮಣಿಪಾಲದ ಕಾಯಿನ್ ಸರ್ಕಲ್‌ನಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಚುನಾವಣಾ ಆಯೋಗ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುಮಾರ್ ಸೊರಕೆ, ಸಂವಿಧಾನವನ್ನು ನಾಶಪಡಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಯತ್ನ ನಡೆಯುತ್ತಿದೆ. ಎಲ್ಲರಿಗೂ ಸಮಾನವಾಗಿ ದೊರೆತಿರುವ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ವಿರೋಧ ಪಕ್ಷಗಳ ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿದ್ದು, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ. ಇತ್ತೀಚಿನ ಯುವಜನರ ಹೋರಾಟದಿಂದ ಅಮಿತ್ ಶಾ ಅಡಗಿಕೊಳ್ಳುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಅಧಿಕಾರದ ಅವಸಾನ ಕಾಲ ಸಮೀಪಿಸುತ್ತಿದೆ ಎಂದು ಹೇಳಿದರು.
ಧಾರ್ಮಿಕ ಚಿಂತಕ ಲಕ್ಷ್ಮೀಶ ಗಬ್ಬಲಡ್ಕ ಮಾತನಾಡಿ, ಸರ್ವಾಧಿಕಾರಕ್ಕೆ ಅಂತ್ಯ ಇದ್ದೇ ಇದೆ. ಜ್ಞಾನೇಶ್ ಅವರ ಪ್ರಭಾವದಿಂದ ಅಧಿಕಾರಕ್ಕೆ ಬಂದ ಮೋದಿ–ಅಮಿತ್ ಶಾ ನೇತೃತ್ವದ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಹೆಚ್ಚು ಸಮಯ ಬೇಕಾಗಿಲ್ಲ. ಅಧಿಕಾರಕ್ಕೆ ಬಂದ ಬಳಿಕ ಮಾಡಿದ ಪಾಪಕರ್ಮಗಳ ಪರಿಣಾಮವನ್ನು ಇಂದು ಜನರು ಅನುಭವಿಸುತ್ತಿದ್ದಾರೆ. ಜನರ ಸಂಕಷ್ಟಗಳಿಗೆ ವಿಮೋಚನೆ ದೊರೆಯಬೇಕಾದರೆ ಪ್ರಜಾಪ್ರಭುತ್ವದ ಪರವಾದ ಜನಶಕ್ತಿ ಒಗ್ಗೂಡಿ ಹೋರಾಡಬೇಕು ಎಂದರು.
ಸಾಹಿತಿ ಡಾ. ಗಣನಾಥ ಎಕ್ಕಾರು ಮಾತನಾಡಿದರು.

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಮಾಜಿ ಶಾಸಕ ಗೋಪಾಲ ಪೂಜಾರಿ, ಸದಾಶಿವ ಉಳ್ಳಾಲ್, ಅಶೋಕ್ ಕುಮಾರ್ ಕೊಡವೂರು, ಉದಯಕುಮಾರ್ ಶೆಟ್ಟಿ ಮುನಿಯಾಲು, ಪ್ರಸಾದ್‌ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ರಮೇಶ್ ಕಾಂಚನ್, ಹರೀಶ್ ಕಿಣಿ, ಗಣೇಶ್ ನೆರ್ಗಿ, ಶಬ್ಬೀರ್ ಅಹ್ಮದ್, ದಿನಕರ ಹೇರೂರು, ಪ್ರಶಾಂತ ಜತ್ತನ್ನ, ರಾಜು ಪೂಜಾರಿ, ವೆರೋನಿಕಾ ಕರ್ನೆಲಿಯೋ, ದಿನೇಶ್ ಕುಲಾಲ್, ಗೋಪಿನಾಥ್ ಭಟ್, ಸದಾನಂದ ಶೆಟ್ಟಿ, ತಿಮ್ಮ ಪೂಜಾರಿ, ಗೀತಾ ವಾಗ್ಳೆ, ಹಬೀಬ್ ಅಲಿ, ಉದ್ಯಾವರ ನಾಗೇಶ್ ಕುಮಾರ್, ಶರ್ಫುದ್ದೀನ್ ಶೇಖ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ವಂದಿಸಿದರು.

