
ಬೆಂಗಳೂರು: ಮುಂಬೈನ ಜಾಮೀಯಾ ಮೊಹಮ್ಮದೀಯಾ ಎಜುಕೇಶನ್ ಸೊಸೈಟಿಯ ಆಡಳಿತದ ಅಧೀನ ಸಂಸ್ಥೆ ಜಾಮೀಯ ಮೊಹಮ್ಮದೀಯಾ ಮನ್ಸೂರಾ ಮದರಸಾ ನೋಂದಣಿಗೆ ಸಂಬಂಧಿಸಿದಂತೆ ಸಂಸ್ಥೆ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಬೆಂಗಳೂರು ನಗರ ಜಿಲ್ಲೆಯ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದಲ್ಲದೇ ಈ ಸಂಸ್ಥೆ ಮುಂಬೈನ ಸಾರ್ವಜನಿಕ ಟ್ರಸ್ಟ್ ನೋಂದಣಿ ಕಚೇರಿಯಲ್ಲಿ ನೋಂದಣಿಯಾಗಿಲ್ಲ ಎಂದು ಗ್ರೇಟರ್ ಮುಂಬೈ ವಲಯದ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಹಾಗಾದರೆ 2016 ರಿಂದ ಬೆಂಗಳೂರಿನಲ್ಲಿರುವ ಸಂಸ್ಥೆಯ ಮದರಸಾದಲ್ಲಿ ಸಾವಿರಾರು ಮಂದಿಗೆ ಶಿಕ್ಷಣ ನೀಡುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳ ಪರಿಸ್ಥಿತಿ ಏನು ಎಂಬ ಪ್ರಶ್ನೆ ಉದ್ಭವವಾಗಿದೆ. ವಿವಿಧ ರಾಜ್ಯಗಳ ವಿದ್ಯಾರ್ಥಿಗಳಿಗೆ ಇಲ್ಲಿನ ಮದರಸಾದಲ್ಲಿ ಶಿಕ್ಷಣ ನೀಡುತ್ತಿದೆ. ಜೊತೆಗೆ ಬೆಂಗಳೂರು, ಮುಂಬೈ ಸೇರಿದಂತೆ ಎಲ್ಲಿಯೂ ನೋಂದಣಿಯಾಗದ ಈ ಸಂಸ್ಥೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ನಕಲಿ ದಾಖಲೆಗಳನ್ನು ಸಲ್ಲಿಸಿ 5 ಲಕ್ಷ ರೂ ಮಂಜೂರು ಮಾಡಿಸಿಕೊಂಡಿತ್ತು. ಹೈಕೋರ್ಟ್ ಸೂಚನೆ ನಂತರವೂ ಹಣ ವಸೂಲಿ ಮಾಡಲು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಇನ್ನೂ ಮೀನಾಮೇಷ ಎಣಿಸುತ್ತಿದೆ.
ಬೆಂಗಳೂರಿನ ಪಾದರಾಯನಪುರದ ಚಾಂದ್ ಪಾಷ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಮದರಸಾಗೆ ಸಂಬಂಧಪಟ್ಟಂತೆ ಮಾಹಿತಿ ಕೋರಿದ್ದರು. ಸದರಿ ಸಂಸ್ಥೆಯು ಬೆಂಗಳೂರು ನಗರ ಜಿಲ್ಲೆಯ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮದರಸಾ ನೋಂದಣಿ ಪ್ರಮಾಣ ಪತ್ರ, ಸೊಸೈಟಿ ನೋಂದಣಿ ಪ್ರಮಾಣ ಪತ್ರ, ಸದಸ್ಯರು, ಟ್ರಸ್ಟಿಗಳ ಪಟ್ಟಿ, ಆಡಳಿತ ಮಂಡಳಿಗಳ ವಿವರಗಳು, ಸದಸ್ಯತ್ವಕ್ಕೆ ಸಂಬಂಧಿಸಿದ ದಾಖಲೆಗಳು, ಸಂಯೋಜನೆ ಪ್ರಮಾಣ ಪತ್ರಗಳು, ಮಾನ್ಯತೆ ಪ್ರಮಾಣ ಪತ್ರಗಳು, ಅನುಮತಿ ಪತ್ರಗಳು, ನೋಟೀಸ್ ಗಳು, ಇತರೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಅವರು ಕೋರಿದ್ದರು. ಆದರೆ ಸದರಿ ಮದರಸಾದ ಆಡಳಿತ ಮಂಡಳಿ ಯಾವುದೇ ಮಾಹಿತಿ ಸಲ್ಲಿಸಿಲ್ಲ ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಅಕ್ರಮವಾಗಿ ನಡೆಯುತ್ತಿರುವ ಮದರಸಾಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಕೊತ್ತನೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಅವರು ಅಕ್ಟೋಬರ್ 16 ರಂದು ಗ್ರೇಟರ್ ಮುಂಬೈ ವಲಯದ ವರಿಷ್ಠಾಧಿಕಾರಿಗಳಿಗೆ ನೋಂದಣಿ ದಾಖಲೆಗಳನ್ನು ಸಲ್ಲಿಸುವಂತೆ ಪತ್ರ ಬರೆದಿದ್ದರು.
ಮಹಾರಾಷ್ಟ್ರದ ಸೊಸೈಟಿಗಳ ನೋಂದಣಿ ಕಾಯ್ದೆ 1860 ಮತ್ತು ಮಹಾರಾಷ್ಟ್ರ ಪಬ್ಲಿಕ್ ಟ್ರಸ್ಟ್ ಕಾಯ್ದೆ 1950 ರ ಅಡಿ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಆದರೆ ಮುಂಬೈನ ಜಾಮೀಯಾ ಮೊಹಮ್ಮದೀಯಾ ಎಜುಕೇಶನ್ ಸೊಸೈಟಿ ಮತ್ತು ಜಾಮೀಯ ಮೊಹಮ್ಮದೀಯಾ ಮನ್ಸೂರಾ ಸಂಸ್ಥೆಗಳು ನೋಂದಣಿಯಾಗಿಲ್ಲ ಎಂದು ಗ್ರೇಟರ್ ಮುಂಬೈ ವಲಯದ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಐದು ಲಕ್ಷ ರೂ ಅನುದಾನ ವಾಪಸ್ ಪಡೆಯುವ ಕುರಿತು ಕೈಗೊಂಡಿರುವ ಕ್ರಮದ ಬಗ್ಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ಹೈಕೋರ್ಟ್ ನ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಟಿ.ಎಂ. ನದಾಫ್ ನೇತೃತ್ವದ ವಿಭಾಗೀಯ ಪೀಠ ಕಳೆದ ತಿಂಗಳು ಎರಡನೇ ಬಾರಿಗೆ ಈ ಮಹತ್ವದ ಆದೇಶ ನೀಡಿತ್ತು.
ಇದಕ್ಕೂ ಮುನ್ನ ಮುಖ್ಯನ್ಯಾಯಮೂರ್ತಿ ವಿಭು ಭಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ನೇತೃತ್ವದ ವಿಭಾಗೀಯಪೀಠ ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಮದರಸಾಗೆ ನೀಡಿರುವ ಹಣದ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿತ್ತು.
