ಅಸಹಾಯಕ ಸ್ಥಿತಿಯಲ್ಲಿದ್ದ ಇಬ್ಬರು ಹಿರಿಯ ನಾಗರಿಕರಿಗೆ ಆಶ್ರಯ, ಪುನರ್ವಸತಿ ವ್ಯವಸ್ಥೆ

0
63

ಉಡುಪಿ : ಅಸಹಾಯಕ ಸ್ಥಿತಿಯಲ್ಲಿದ್ದ ಇಬ್ಬರು ಹಿರಿಯ ನಾಗರಿಕರಾದ ಆನಂದ ಮತ್ತು ಅಲ್ಬಕ್ಷ್ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ, ಬಳಿಕ ಆಶ್ರಯ ಹಾಗೂ ಪುನರ್ವಸತಿ ಸೌಲಭ್ಯ ಕಲ್ಪಿಸುವ ಮೂಲಕ ಮಾನವೀಯ ಸೇವೆ ಸಲ್ಲಿಸಲಾಗಿದೆ.

ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಅಸಹಾಯಕ ಸ್ಥಿತಿಯಲ್ಲಿದ್ದ ಇರ್ವರು ವೃದ್ಧರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಚಿಕಿತ್ಸೆಯ ಬಳಿಕ ಇಬ್ಬರೂ ಗುಣಮುಖರಾದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರನ್ನು ಪತ್ತೆಹಚ್ಚುವ ಪ್ರಯತ್ನವು ನಡೆದಿತ್ತು. ಆದರೆ, ಸಂಬಂಧಿಕರ ಬಗ್ಗೆ ಯಾವುದೇ ಸೂಕ್ತ ಮಾಹಿತಿ ಲಭ್ಯವಾಗದ ಕಾರಣ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

ಈ ಹಿನ್ನೆಲೆಯಲ್ಲಿ ಇಬ್ಬರು ಹಿರಿಯ ನಾಗರಿಕರಿಗೆ ತಾತ್ಕಾಲಿಕ ಆಶ್ರಯ ಹಾಗೂ ಪುನರ್ವಸತಿ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀಮತಿ ರತ್ನ ಅವರ ಮಾರ್ಗದರ್ಶನದಲ್ಲಿ ಅಗತ್ಯ ಕ್ರಮ ಕೈಗೊಂಡು, ಇಬ್ಬರನ್ನೂ ಕಾರ್ಕಳದ ಹೊಸ ಬೆಳಕು ವೃದ್ಧಾಶ್ರಮಕ್ಕೆ ದಾಖಲಿಸಿ ಸುರಕ್ಷಿತ ಆಶ್ರಯ ಕಲ್ಪಿಸಲಾಗಿದೆ.

ಈ ಮಾನವೀಯ ಕಾರ್ಯಕ್ಕೆ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಯೋಜನಾ ಸಂಯೋಜಕ ರೋಶನ್ ಕೆ., ಆಪ್ತ ಸಮಾಲೋಚಕಿ ನಯನಾ ಹಾಗೂ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಸಹಕರಿಸಿದ್ದಾರೆ.

ಅಸಹಾಯಕ ಸ್ಥಿತಿಯಲ್ಲಿದ್ದ ಹಿರಿಯ ನಾಗರಿಕರಿಗೆ ಸೂಕ್ತ ಆಶ್ರಯ ಮತ್ತು ಪುನರ್ವಸತಿ ಸೌಲಭ್ಯ ಕಲ್ಪಿಸುವಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯವರ ಮಾರ್ಗದರ್ಶನ ಹಾಗೂ ಸಹಕಾರ ಮತ್ತು ಹೊಸ ಬೆಳಕು ವೃದ್ಧಾಶ್ರಮದ ಮುಖ್ಯಸ್ಥೆ ಶ್ರೀಮತಿ ತನುಲಾತರುಣ್ ಅವರ ಸೇವೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಆನಂದ ಮತ್ತು ಅಲ್ಬಕ್ಷ್ ಅವರ ಸಂಬಂಧಿಕರ ಯಾರಿಗಾದರೂ ಮಾಹಿತಿ ಲಭ್ಯವಿದ್ದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ. ಸಂಪರ್ಕಕ್ಕಾಗಿ ಟೋಲ್ ಫ್ರೀ ಸಂಖ್ಯೆ 1090 ಅಥವಾ ದೂರವಾಣಿ ಸಂಖ್ಯೆ 0820-2526394 ಅನ್ನು ಸಂಪರ್ಕಿಸಬಹುದಾಗಿದೆ.