ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಿಯಕರನಿಗಾಗಿ ಉಪ್ಪಳಕ್ಕೆ ಬಂದ ಯುವತಿ

0
9

ಮಂಜೇಶ್ವರ: ಪ್ರಿಯಕರನನ್ನು ಹುಡುಕಿಕೊಂಡು ಛತ್ತೀಸ್‌ಗಢದಿಂದ ಕೇರಳದ ಉಪ್ಪಳಕ್ಕೆ ಬಂದಿದ್ದ 19 ವರ್ಷದ ಯುವತಿಯನ್ನು ಪೊಲೀಸರು ಪತ್ತೆಹಚ್ಚಿರುವ ಘಟನೆ ಬೆಳಕಿಗೆ ಬಂದಿದೆ.

ಉಪ್ಪಳದ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪ್ರಿಯಕರನನ್ನು ಹುಡುಕಿಕೊಂಡು ಯುವತಿ ಸುಮಾರು ಒಂದು ವಾರದ ಹಿಂದೆ ಛತ್ತೀಸ್‌ಗಢದಿಂದ ಉಪ್ಪಳಕ್ಕೆ ಆಗಮಿಸಿದ್ದಳು. ಬಳಿಕ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ.

ಇತ್ತ ಯುವತಿ ಮನೆಗೆ ಮರಳದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಛತ್ತೀಸ್‌ಗಢ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಯುವತಿಯ ಸುಳಿವು ಪತ್ತೆಹಚ್ಚಿ ಉಪ್ಪಳಕ್ಕೆ ಆಗಮಿಸಿದ್ದರು.

ಯುವತಿಯನ್ನು ಪತ್ತೆಹಚ್ಚಿದ ಪೊಲೀಸರು ಆಕೆಯನ್ನು ತಮ್ಮೊಂದಿಗೆ ಕರೆದೊಯ್ಯಲು ಮುಂದಾದಾಗ, ಪೊಲೀಸರೊಂದಿಗೆ ಒಬ್ಬಳೇ ತೆರಳಲು ಯುವತಿ ನಿರಾಕರಿಸಿದ್ದಾಳೆ ಎನ್ನಲಾಗಿದೆ. ಬಳಿಕ ಯುವತಿಯ ಇಚ್ಛೆಯಂತೆ ಆಕೆಯ ಪ್ರಿಯಕರನನ್ನೂ ಜೊತೆಗೆ ಕರೆದುಕೊಂಡು ಛತ್ತೀಸ್‌ಗಢ ಪೊಲೀಸರು ಹಿಂದಿರುಗಿದ್ದಾರೆ ಎಂದು ತಿಳಿದುಬಂದಿದೆ.