ಎರಡು ದಶಕಗಳ ಚೆಸ್ ಸೇವೆಗೆ ಉಮಾನಾಥ್ ಕಾಪು ಅವರಿಗೆ ಸನ್ಮಾನ

0
17

ಉಡುಪಿ ಜಿಲ್ಲೆಯಲ್ಲಿ ಚೆಸ್ ಕ್ರೀಡೆಯ ಬೆಳವಣಿಗೆ ಮತ್ತು ಪ್ರಚಾರಕ್ಕಾಗಿ ಕಳೆದ ಎರಡು ದಶಕಗಳಿಂದ ನಿರಂತರವಾಗಿ ಶ್ರಮಿಸುತ್ತಿರುವ ಕ್ರೀಡಾ ಸಂಘಟಕ ಹಾಗೂ ಸಮಾಜಮುಖಿ ವ್ಯಕ್ತಿತ್ವದ ಉಮಾನಾಥ್ ಕಾಪು ಅವರನ್ನು ಶಾಲಾ ಶಿಕ್ಷಣ ಇಲಾಖೆ, ಉಡುಪಿ ಹಾಗೂ ಕಾರ್ಕಳ ಜ್ಞಾನಸುಧ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಆಯೋಜಿಸಲಾದ ಕರ್ನಾಟಕ ರಾಜ್ಯಮಟ್ಟದ 17 ವರ್ಷದೊಳಗಿನ ಬಾಲಕ-ಬಾಲಕಿಯರ ಚೆಸ್ ಪಂದ್ಯಾವಳಿಯ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಉಮಾನಾಥ್ ಕಾಪು ಅವರು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಹಾಗೂ ಶ್ರೀ ನಾರಾಯಣ ಗುರು ಸ್ಪೋರ್ಟ್ಸ್ ಆ್ಯಂಡ್ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ (ರಿ.), ಕಾಪು ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಕಳೆದ 20 ವರ್ಷಗಳಿಂದ ಜಿಲ್ಲಾ, ಅಂತರ್ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ 30ಕ್ಕೂ ಅಧಿಕ ಚೆಸ್ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಅಲ್ಲದೆ, ಜಿಲ್ಲೆಯ ವಿವಿಧ ಚೆಸ್ ಪಂದ್ಯಾವಳಿಗಳಿಗೆ ಪ್ರೋತ್ಸಾಹ ಮತ್ತು ಸಹಕಾರ ನೀಡುವ ಮೂಲಕ ಕ್ರೀಡೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ಚೆಸ್ ಕ್ರೀಡೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಉದ್ದೇಶದಿಂದ ಅವರ ನೇತೃತ್ವದಲ್ಲಿ 2027ರ ಮಾರ್ಚ್ 31ರಿಂದ ಏಪ್ರಿಲ್ 5ರವರೆಗೆ ಕಾಪುವಿನಲ್ಲಿ ಎಸ್‌ಎನ್‌ಜಿ ಅಂತಾರಾಷ್ಟ್ರೀಯ ಚೆಸ್ ಉತ್ಸವ – 2027 ಆಯೋಜಿಸಲಾಗುತ್ತಿದೆ. ಈ ಬೃಹತ್ ಕ್ರೀಡಾಕೂಟದಲ್ಲಿ ಒಟ್ಟು ರೂ. 8.50 ಲಕ್ಷ ನಗದು ಬಹುಮಾನ ಹಾಗೂ 800ಕ್ಕೂ ಅಧಿಕ ಟ್ರೋಫಿಗಳನ್ನು ವಿತರಿಸುವ ಯೋಜನೆ ರೂಪಿಸಲಾಗಿದೆ.

ಇದಲ್ಲದೆ, ಕಳೆದ 15 ವರ್ಷಗಳಿಂದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಎಸ್‌ಜಿಎಫ್‌ಐ (SGFI) ಶಾಲಾ ಚೆಸ್ ಪಂದ್ಯಾವಳಿಗಳಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಶಾಲಾ ವಿದ್ಯಾರ್ಥಿಗಳಲ್ಲಿ ಚೆಸ್ ಕ್ರೀಡೆಯ ಆಸಕ್ತಿ ಬೆಳೆಸುವಲ್ಲಿ ಹಾಗೂ ಪಂದ್ಯಾವಳಿಗಳ ಯಶಸ್ವಿ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ವೃತ್ತಿಜೀವನದಲ್ಲಿ ಪಶುಸಂಗೋಪನಾ ಇಲಾಖೆಯಲ್ಲಿ ಕಂಪೌಂಡರ್ ಆಗಿ ಸೇವೆ ಸಲ್ಲಿಸಿ, 14 ವರ್ಷಗಳ ಹಿಂದೆ ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದಾರೆ.

ಕ್ರೀಡೆಯ ಮೇಲಿನ ಅಪಾರ ಆಸಕ್ತಿ, ಸಂಘಟನಾ ಚಾತುರ್ಯ, ನಾಯಕತ್ವ ಗುಣ ಹಾಗೂ ಸಮಾಜಮುಖಿ ಸೇವೆಯನ್ನು ಗುರುತಿಸಿ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನ ಸಲ್ಲಿಸಲಾಯಿತು. ಉಡುಪಿ ಜಿಲ್ಲೆಯ ಚೆಸ್ ಕ್ರೀಡೆಯ ಬೆಳವಣಿಗೆಗೆ ಅವರು ಸಲ್ಲಿಸುತ್ತಿರುವ ಸೇವೆ ಕ್ರೀಡಾಸಕ್ತರಿಗೆ ಹಾಗೂ ಯುವ ಪೀಳಿಗೆಗೆ ಪ್ರೇರಣೆಯಾಗಿದೆ.
ಕಾರ್ಕಳ ಜ್ಞಾನಸುಧ ಸಂಸ್ಥೆಯ ಸಿಇಒ ದಿನೇಶ್ ಎಂ ಕೊಡವೂರು ಉಡುಪಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರವಿಚಂದ್ರ ಕಾರಂತ್ ಉಪಸ್ಥಿತರಿದ್ದರು